ಗ್ರಾಪಂಗಳಲ್ಲಿ ಮಳೆ ನೀರು ಕೊಯ್ಲು ಮಾಡಿ

ZP-ceo-Meeting
Published on

ಕಾರವಾರ: ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಅವರು ನರೇಗಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವುದು, ತಾಪಮಾನ ಹೆಚ್ಚಳ, ಹವಾಮಾನ ವೈಪರೀತ್ಯದಿಂದಾಗಿ ಅಂತರ್ಜಲ ಮಟ್ಟ ಕುಗ್ಗಿ ನೀರಿನ ಸಮಸ್ಯೆ ಎದುರಿಸಬೇಕಾಗುತ್ತಿದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆಗಾಗಿ ಯೋಜನೆಯಲ್ಲಿ ಆದ್ಯತೆ ನೀಡಬೇಕು.ಕೊಳವೆ ಬಾವಿ ಮರುಪೂರಣ ಘಟಕ, ಕೆರೆ ಹೂಳೆತ್ತುವುದು, ಕಲ್ಯಾಣಿ ಅಭಿವೃದ್ಧಿ ಪಡಿಸುವುದು ಸೇರಿದಂತೆ ಜಲ ಮೂಲಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ನರೇಗಾದಲ್ಲಿ ಕಳೆದ ವರ್ಷ ಮಾನವ ಸೃಜನೆಯಲ್ಲಿ ಗುರಿ ಸಾಧಿಸಿದಂತೆ ಈ ವರ್ಷವೂ ಉತ್ತಮ ಕಾರ್ಯಸೂಚಿಯೊಂದಿಗೆ ಕಾರ್ಯಪ್ರವರ್ತರಾಗಬೇಕು ಎಂದರು. ಇದರೊಂದಿಗೆ ಕೂಲಿಕಾರರ ಭಾಗವಹಿಸುವಿಕೆ, ಮಾನವ ದಿನಗಳ ಸೃಜನೆ, ಕಾಮಗಾರಿ ಪೂರ್ಣಗೊಳಿಸುವಿಕೆ, ಮಳೆ ನೀರು ಕೊಯ್ಲು, ಎನ್‌ಎಮ್‌ಎಮ್‌ಎಸ್, ಜಿಯೋ ಟ್ಯಾಗ್, ಏರಿಯಾ ಆಫಿಸರ್ ವಿಸಿಟ್, ಆದ್ಯತೆಯ ಕಾಮಗಾರಿಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸಮಾಲೋಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net