ಸ್ವಚ್ಛತೆ ನಮ್ಮ ಉಸಿರಾಗಲಿ, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸಲಹೆ

zp ceo koppal rahula ratnam pandey swach bharat
Published on

ಕೊಪ್ಪಳ: ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛ ಪರಿಸರವೇ ನಮ್ಮ ಉಸಿರಾಗಲಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಸಲಹೆ ನೀಡಿದರು.

ತಾಲೂಕಿನ ಹಾಲವರ್ತಿ ಗ್ರಾಪಂ ವ್ಯಾಪ್ತಿಯ ಬಸಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲಾ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸ್ವಚ್ಛತೆ ಪ್ರಜ್ಞೆ ಎಲ್ಲರಲ್ಲಿ ಬರಬೇಕು. ನಮ್ಮ ಮನೆ, ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಗ್ರಾಪಂವಾರು ಕಸ ಸಂಗ್ರಹ ವಾಹನ ಬರಲಿವೆ. ಒಣ, ಹಸಿ ಕಸ ಬೇರ್ಪಡಿಸಿ ನೀಡಿ. ವಾರದಲ್ಲಿ ಕನಿಷ್ಟು ಹಲವು ಗಂಟೆಗಳಾದೂ ಸ್ವಚ್ಛತಾ ಕಾರ್ಯಕ್ಕೆ ಮೀಸಲಿಡಿ. ದೇಹಕ್ಕೆ ವ್ಯಾಯಾಮ ಆಗಲಿದೆ. ಆರೋಗ್ಯ ವೃದ್ಧಿಸುವ ಜತೆಗೆ ವಾತಾವರಣ ಚೆಂದವಾಗುವುದು. ಜನರನ್ನು ಒಟ್ಟುಗೂಡಿಸಿ ಸಾಮೂಹಿಕ ಸ್ವಚ್ಛತಾ ಕೆಲಸ ಹಮ್ಮಿಕೊಂಡಲ್ಲಿ ಜಾಗೃತಿ ಮೂಡಲಿದೆ. ಎಲ್ಲರೂ ನಿಮ್ಮ ಮನೆ ಮುಂದೆ ಗಿಡಗಳನ್ನು ನೆಟ್ಟು ಪೋಷಿಸಿ. ಸ್ವಚ್ಛತಾ ಕೆಲಸ ಕೇವಲ ಸರ್ಕಾರದ ಕೆಲಸವಲ್ಲ. ಜನರೂ ಭಾಗಿಯಾಗಬೇಕು. ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಿ ಎಂದು ಮನವಿ ಮಾಡಿದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ಸ್ವಚ್ಛತಾ ಹೀ ಸೇವಾ ಅಂಗವಾಗಿ ಅ.2ವರೆಗೆ ಗ್ರಾಪಂವಾರು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆ, ಅಂಗನವಾಡಿ, ಧಾರ್ಮಿಕ ಸ್ಥಳಗಳು, ಕಲ್ಯಾಣಿ, ಬಾವಿ ಇನ್ನಿತರ ಸಾರ್ವಜನಿಕ ಸ್ಥಳ ಸ್ವಚ್ಛಗೊಳಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಸಿಇಒ ಸೇರಿ ಇತರ ಅಧಿಕಾರಿಗಳು ನಾಲಾ ಸ್ವಚ್ಛತೆಯಲ್ಲಿ ಭಾಗಿಯಾದರು. ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನರೇಗಾ ವೈಯಕ್ತಿಕ ಕಾರ್ಯಕ್ರಮದಡಿ ಆದೇಶ ಪತ್ರ ವಿತರಿಸಲಾಯಿತು. ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಪಂ ಅಧ್ಯೆ ಜಯಪ್ರದಾ ಭರಮಪ್ಪ ಗೊರವರ, ಉಪಾಧ್ಯಕ್ಷ ಮಹೇಂದ್ರ ಹಾಲವರ್ತಿ, ತಾಪಂ ಇಒ ದುಂಡಪ್ಪ ತುರಾದಿ, ಸಾಮಾಜಿಕ ಅರಣ್ಯ ವಿಭಾಗದ ಗುರುನಗೌಡ ಪಾಟೀಲ್​, ಯಂಕಪ್ಪ, ರಾಜೇಸಾಬ್​, ಮಲ್ಲಿಕಾರ್ಜು ಇತರ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net