ಜೆಜೆಎಂ ಕಾಮಗಾರಿಪರಿಶೀಲಿಸಲು ಜಿಪಂ‌ ಸಿಇಒ ಅಧಿಕಾರಿಗಳಿಗೆ ಸೂಚನೆ

Screenshot_2024-05-17-20-33-25-23.jpg
Published on

ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ‘ನಲ್ಲಿ’ ಮೂಲಕ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಖುದ್ದಾಗಿ ಪರಿಶೀಲಿಸಿ ಗ್ರಾಪಂಗಳಿಗೆ ಹಸ್ತಾಂತರಿಸಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.

 ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೆಜೆಎಂ ಕಾಮಗಾರಿಗಳನ್ನು ಕೂಡಲೇ ಮುಕ್ತಾಯಗೊಳಿಸಿ ಗ್ರಾಪಂಗಳಿಗೆ ಹಸ್ತಾಂತರಿಸಬೇಕು. ಗುಣಮಟ್ಟದ ಜತೆಗೆ ಮನೆಮನೆಗೆ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಬರುತ್ತಿರುವ ಕುರಿತು ತಾಲೂಕುಮಟ್ಟದ ಅಧಿಕಾರಿಗಳು ಪರಿಶೀಲಿಸಬೇಕು. ನಿರ್ಲಕ್ಷೃ, ವಿಳಂಬ ಮಾಡಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

 ತೀವ್ರ ಬರ ಉದ್ಭವಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು, ಇಂಜಿನಿಯರ್‌ಗಳು ಹಳ್ಳಿಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆ ಬಗೆಹರಿಸಬೇಕು. ಜಿಲ್ಲಾ, ತಾಲೂಕುಮಟ್ಟದ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡಬೇಡಿ. ಇದರ ಮೇಲ್ವಿಚಾರಣೆಯನ್ನು ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾಡಬೇಕು. ತಪ್ಪು ಮಾಹಿತಿ ನೀಡುವ, ಸಮಸ್ಯೆಗಳನ್ನು ಬಗೆಹರಿಸದೆ ನಿರ್ಲಕ್ಷೃ ಮಾಡುವವರ ಕುರಿತು ವರದಿ ಸಲ್ಲಿಸಬೇಕು ಎಂದೂ ಸೂಚಿಸಿದರು.

 ಜಿಲ್ಲೆಯಲ್ಲಿ ವರ್ಷಗಳಿಂದ ಪ್ರಗತಿ ಹಂತದಲ್ಲಿರುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ಕುರಿತು ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಆರ್ಥಿಕ ಮತ್ತು ಭೌತಿಕವಾಗಿ ಪರಿಶೀಲಿಸಬೇಕು. ಯಾವ ಕಾಮಗಾರಿಗಳು ಯಾವ ಹಂತದಲ್ಲಿವೆ, ಎಷ್ಟು ಕಾಮಗಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಕಾಮಗಾರಿಗಳ ಸ್ಥಗಿತಗೊಂಡಿರುವ ಕುರಿತು ಮಾಹಿತಿ ಸಲ್ಲಿಸಬೇಕು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

 ಹಳ್ಳಿಗಳಲ್ಲಿ ಪೂರೈಸುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಬೆಳಗಾವಿ, ಚಿಕ್ಕೋಡಿ ವಿಭಾಗದಲ್ಲಿ ಟ್ಯಾಂಕರ್ ನೀರು ಎಲ್ಲಿಂದ ಪೂರೈಸುತ್ತಿದ್ದಾರೆ ಎಂಬ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮಗಳಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ತಿಂಗಳಿಗೆ ಕನಿಷ್ಠ ಒಂದು ಬಾರಿ ಸ್ವಚ್ಛಗೊಳಿಸಬೇಕು. ಅದರ ಉಸ್ತುವಾರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

 ಜಿಪಂ ಯೋಜನಾ ನಿರ್ದೇಶಕ ಡಾ.ಎಂ. ಕೃಷ್ಣರಾಜು, ಆರ್‌ಡಿಡಬ್ಲುೃಎಸ್ ಬೆಳಗಾವಿ ವಿಭಾಗದ ಇಇ ಶಶಿಕಾಂತ ನಾಯಕ, ಚಿಕ್ಕೋಡಿ ವಿಭಾಗದ ಇಇ ಪಾಂಡುರಂಗ ರಾವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net