

ರಾಮನಗರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡಳಿತವನ್ನು ಮತ್ತಷ್ಟು ಸುಧಾರಣೆಗೊಳಿಸಲು ಗ್ರಾಮ ಒನ್ ಕಾರ್ಯಕ್ರಮವನ್ನು ಸರ್ಕಾರ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಹೇಳಿದರು.
ತಾಲೂಕಿನ ಹರೀಸಂದ್ರ ಗ್ರಾಪಂ ಆವರಣದಲ್ಲಿ ಗ್ರಾಮ ಒನ್ ಸೇವೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬಾಪೂಜಿ ಸೇವಾ ಕೇಂದ್ರದಲ್ಲಿ ದೊರೆಯುತ್ತಿದ್ದ ಎಲ್ಲ ಸೇವೆಗಳನ್ನೂ ಒಂದೆ ಸೂರಿನಡಿಯಲ್ಲಿ ದೊರಕಿಸಿಕೊಡಲು ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ರೈತರಿಗೆ ದೊರೆಯಬೇಕಾದ ಎಲ್ಲ ಸೇವೆಗಳು ಮುಂದಿನ ದಿನಗಳಲ್ಲಿ ಗ್ರಾಮ ಒನ್‌ಗಳಲ್ಲಿಯೇ ಸಿಗಲಿದೆ. ಆನ್‌ಲೈನ್‌ನಲ್ಲಿಯೇ ಎಲ್ಲ ಸೇವೆಗಳನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಹೇಳಿದರು.
ಪಂಚತಂತ್ರ 2.0 ವ್ಯವಸ್ಥೆಯನ್ನು ಫೆ.15ರಿಂದ ಗ್ರಾಮ ಪಂಚಾಯಿತಿಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು, ರೈತರು ತಮ್ಮ ಜಮೀನು, ಮನೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಮಂಚೆಗೌಡ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು, ಪಂಚಾಯಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಹೆಚ್ಚಿನ ಆರ್ಥಿಕ ಅನುದಾನ ನೀಡಬೇಕಾಗಿದೆ. ಪಂಚಾಯಿತಿಗಳಲ್ಲಿ ಪ್ರಾರಂಭವಾಗುವ ಯಾವುದೇ ಯೋಜನೆಗಳು ಆರಂಭ ಶೂರತ್ವಕ್ಕೆ ಸೀಮಿತವಾಗದೆ ನಿರಂತರವಾಗಿ ನಡೆಯುವಂತಾಗಬೇಕು ಎಂದರು.
ಪಂಚಾಯಿತಿಗಳಿಗೆ ಬಲ ತುಂಬುವ ಕೆಲಸ ಆಗಬೇಕು: ಪಂಚಾಯಿತಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇದರಿಂದ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಇದರಿಂದ ಇಡೀ ಆಡಳಿತ ವ್ಯವಸ್ಥೆ ಹದಗೆಡುತ್ತದೆ. ಇಂತಹ ಆಲೋಚನೆಯಿಂದ ಸರ್ಕಾರ ದೂರಸರಿದು ಪಂಚಾಯತಿಗಳಿಗೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಬೇಕೆಂದು ಆಶಾ ಮಂಚೇಗೌಡ ಒತ್ತಾಯಿಸಿದರು.
ಜಿಪಂ ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಮಂಜು, ತಾಪಂ ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ರಂಜಿತ್, ದೀಪು, ಸಂಜೀವಿನಿ ಗುಂಪಿನ ಸದಸ್ಯರುಗಳು ಉಪಸ್ಥಿತರಿದ್ದರು.