

ಕೊಪ್ಪಳ: ಪ್ರತಿ ಮನೆಯವರು ಒಣ ಮತ್ತು ಹಸಿ ಕಸ ಬೇರ್ಪಡಿಸಿ ಸ್ವಚ್ಛ ವಾಹನ ಸಿಬ್ಬಂದಿಗೆ ನೀಡುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ತಿಳಿಸಿದರು.
ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಶುಕ್ರವಾರ ಸ್ವತಃ ಸ್ವಚ್ಛತಾ ವಾಹನ ಚಲಾಯಿಸಿ ಜಾಗೃತಿ ಮೂಡಿಸಿ ಮಾತನಾಡಿದರು.
ಕಸ ನೀಡುವಾಗ ಸಂಗ್ರಹ ಶುಲ್ಕ 1ರೂ. ನೀಡಿ. ಅಂಗಡಿಕಾರರು ಕಡ್ಡಾಯವಾಗಿ ಶುಲ್ಕ ಪಾವತಿಸಿ. ಇದರಿಂದ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. ಬಳಿಕ 2023-24ನೇ ಸಾಲಿನಲ್ಲಿ ಅನುಷ್ಠಾನಗೊಂಡ ನರೇಗಾ ಕಾಮಗಾರಿಗಳ ಕಡತ ಪರಿಶೀಲಿಸಿದರು.
ನರೇಗಾದಡಿ ಕೂಲಿ ಕೆಲಸ ನೀಡಿ, ವಿವಿಧ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಪೂರ್ಣಗೊಳಿಸಿ. ಈ ಸಂಬಂಧ ಫಲಾನುಭವಿಗಳಿಗೆ ಮಾಹಿತಿ ನೀಡಿ. ನಿತ್ಯ ಕರ ವಸೂಲಿ ಮಾಡಿ.
ಸಂಜೀವಿನಿ ಒಕ್ಕೂಟಗಳಿಗೆ ಕೋಳಿ ಶೆಡ್ ನಿರ್ಮಿಸಿಕೊಡಿ. ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆ ಪೂರೈಕೆಗೆ ಎಸ್ಡಿಎಂಸಿಯೊಡನೆ ಒಪ್ಪಂದ ಮಾಡಿಕೊಳ್ಳಿ. ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಿ. ಟೆಂಡರ್ ಕರೆದು ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಂಗಾಪುರ, ಭೀಮನೂರು ಗ್ರಾಮಗಳಲ್ಲಿ ಮಾತ್ರ ಜೆಜೆಎಂ ಮುಕ್ತಾಯಗೊಂಡಿದೆ. ಕಾಮನೂರು, ಲೇಬಗೇರಿ, ಹನಮನಹಳ್ಳಿ ಗ್ರಾಮಗಳಲ್ಲಿ ನಳ ಜೋಡಣೆ ಪೂರ್ಣವಾಗಿಲ್ಲ.
ಕೆರೆ, ಗೋಮಾಳ, ಸ್ಮಶಾನಗಳಿಗೆ ಹದ್ದುಬಸ್ತು ಮಾಡಿಕೊಡುವಂತೆ ಗ್ರಾಪಂ ಅಧ್ಯಕ್ಷ, ಸದಸ್ಯರು ಸಿಇಒ ಗಮನಕ್ಕೆ ತಂದರು. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಿಇಒ ತಿಳಿಸಿದರು.
ತಾಪಂ ಇಒ ದುಂಡಪ್ಪ ತುರಾದಿ, ಗ್ರಾಪಂ ಅಧ್ಯಕ್ಷೆ ದೇವಮ್ಮ ಮಹಾದೇವಪ್ಪ ಕುರಿ, ಸದಸ್ಯರಾದ ನಾಗಪ್ಪ ದೊಡ್ಡಮನಿ, ಫಕೀರಗೌಡ ಗೌಡ್ರ, ಬಸವರಾಜ ಯತ್ನಟ್ಟಿ, ಪಿಡಿಒ ಸಂಗಮೇಶ ತೇರಿನ, ಜಿಲ್ಲಾ ಎಸ್‌ಬಿಎಂ ಸಮಾಲೋಚಕರಾದ ಮಾರುತಿ ನಾಯಕ,
ಬಸಮ್ಮ ಹುಡೇದ, ರಾಮಣ್ಣ ಬಂಡಿಹಾಳ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ರಡ್ಡಿ ಇತರರಿದ್ದರು.