ಸರ್ಕಾರದ ಯೋಜನೆ ಅನುಷ್ಠಾನ ಸಭೆಗೆ ಖಾಸಗಿ ಬ್ಯಾಂಕ್ ಅಧಿಕಾರಿಗಳು ಗೈರು: ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ ಜಿಲ್ಲಾ ಪಂಚಾಯಿತಿ ಸಿಇಒ

Zp CEO displeasure against the behavior of private bank officials mandya
Published on

ಮಂಡ್ಯ: ಜಿಲ್ಲಾಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಗೆ ಖಾಸಗಿ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿಲ್ಲ. ಈ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ರಾಜ್ಯ ಸಲಹಾ ಸಮಿತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ನಗರದ ಲೀಡ್ ಬ್ಯಾಂಕ್‌ನ ಕಾರ್ಯಾಲಯದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಆಯೋಜಿಸಿದ್ದ ನಾಲ್ಕನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಹಾಗೂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್‌ಗಳ ಆರ್ಥಿಕ ಚಟುವಟಿಕೆ, ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಭೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿವೆ. ಆದರೆ ಖಾಸಗಿ ಬ್ಯಾಂಕ್‌ಗಳ ಪ್ರತಿನಿಧಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ 8230.70 ಕೋಟಿ ರೂ ಇದ್ದು, ಇದರಲ್ಲಿ ಶೇ.112ರಷ್ಟು ಸಾಧನೆಯಾಗಿದೆ. ಆದ್ಯತಾ ರಂಗಕ್ಕೆ 9216.75 ಕೋಟಿ ರೂ ಸಾಲ ನೀಡಿ ಶೇ.112ರಷ್ಟು ಗುರಿ ಸಾಧಿಸಲಾಗಿದೆ. ಕೃಷಿ ರಂಗಕ್ಕೆ 7137.03 ಕೋಟಿ ರೂ ಸಾಲ ಕೊಟ್ಟು ಶೇ. 107ರಷ್ಟು ಪ್ರಗತಿ ಸಾಧಿಸಲಾಗಿದೆ. ಕೈಗಾರಿಕಾ ರಂಗಕ್ಕೆ 1155.57 ಕೋಟಿ ರೂ ಸಾಲ ನೀಡಿ ಶೇ.153ರಷ್ಟು ಗುರಿ ಸಾಧನೆ ಹಾಗೂ ಇತರೆ ಆಧ್ಯತಾ ರಂಗಕ್ಕೆ 816.39 ಕೋಟಿ ಸಾಲ ನೀಡಿ ಶೇ.113ರಷ್ಟು ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಈವರೆಗೆ ಒಟ್ಟು 6005.85 ಕೋಟಿ ರೂ ಸಾಲ ವಿತರಣೆ ಆಗಿರುತ್ತದೆ. ಅಲ್ಪ ಸಂಖ್ಯಾತರಿಗೆ 360.95 ಕೋಟಿ ರೂ ಮತ್ತು ಮಹಿಳಾ ಖಾತೆದಾರರಿಗೆ 4850.74 ಕೋಟಿ ರೂ ವಿತರಣೆಯಾಗಿದೆ. ಸರ್ಕಾರದ ಹಲವು ಯೋಜನೆಗಳಾದ ಉದ್ಯೋಗಿನಿ, ಸ್ವಉದ್ಯೋಗ ಯೋಜನೆ ಮತ್ತು ಇಡಿಪಿ ಯೋಜನೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಅರ್ಜಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಲಾಗಿದ್ದು, ಸಾಲ ಮಂಜೂರಿಗೆ ಕ್ರಮ ವಹಿಸಲಾಗುತ್ತಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಲ್ಲಿಯೂ ಸಹ ಇನ್ನೂ ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕು ಎಂದು ಸೂಚಿಸಿದರು.

ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಡಾ.ನವೀನ್‌ಕುಮಾರ್, ಆರ್‌ಬಿಐ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ಡಿಡಿಎಂ ಹರ್ಷಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net