ಜಿಪಂನಲ್ಲಿ ‘ಕಸದ ಬಕೆಟ್’ ಹಗರಣ ಬಯಲು ; 14 ಕೋಟಿ ರೂ. ದುರುಪಯೋಗ ; 76 ಗ್ರಾಪಂಗಳಲ್ಲಿ ನಿಯಮ ಉಲ್ಲಂಘನೆ ; ಕಳಪೆ ಬಕೆಟ್ ಖರೀದಿ

ZP tmk
Published on

ತುಮಕೂರು ; ಗ್ರಾಪಂ ಸದಸ್ಯರ ವಿರೋಧ ಲೆಕ್ಕಿಸದೆ ಜಿಲ್ಲೆಯ 76 ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಆರಂಭಿಸಲಾಗಿರುವ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಅಕ್ರಮ ನಡೆದಿರುವುದು ದೃಢವಾಗಿದೆ.

ವಾಹನ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ‘ವಾಹನ ಖರೀದಿಯಲ್ಲಿ ಕಿಕ್‌ಬ್ಯಾಕ್’ ಶೀರ್ಷಿಕೆಯಲ್ಲಿ ಏ.21ರಂದು ವಿಜಯವಾಣಿ ವರದಿ ಪ್ರಕಟಿಸಿತ್ತು. ಗ್ರಾಪಂ ಪರಮಾಧಿಕಾರ ಮೊಟಕುಗೊಳಿಸಿ ಜಿಪಂ ಅಧಿಕಾರಿಗಳೇ ಯೋಜನೆ ಸಂಯೋಜಕರ ಮೂಲಕ ಒತ್ತಡ ತಂದು ಒಂದೇ ಸಂಸ್ಥೆಯಿಂದ ವಾಹನ ಖರೀದಿಸಿರುವ ಬಗ್ಗೆ ಗಮನ ಸೆಳೆದಿತ್ತು.

ಜಿಲ್ಲೆಯ 330 ಗ್ರಾಪಂಗಳ ಪೈಕಿ 76 ಗ್ರಾಪಂಗಳಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ವಾಹನ ಹಾಗೂ ಬಕೆಟ್ ಖರೀದಿಸಿದ್ದು, ಅದರಲ್ಲಿ ಅಕ್ರಮ ನಡೆಸಲಾಗಿದೆ ಎಂದು ಖುದ್ದು ಜಿಪಂ ಆಡಳಿತಕ್ಕೆ ಮನವರಿಕೆಯಾಗಿದೆ. ಕೊಳ್ಳೆಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತೆ ಈಗ ಟೆಂಡರ್ ಕರೆದಿರುವ ಹಾಗೂ ನೀಡಿರುವ ಕಾರ್ಯಾದೇಶ ರದ್ದುಪಡಿಸಲು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಜೂ.14ರಂದು ಅಧಿಕೃತ ಸೂಚನೆ ನೀಡಿದ್ದಾರೆ.

ಆದರೆ, ಈಗಾಗಲೇ ಘಟಕ ಆರಂಭಿಸುವುದಾಗಿ ಬರೋಬ್ಬರಿ 14 ಕೋಟಿ ರೂಪಾಯಿ ಖರ್ಚು ಮಾಡಿರುವ ಅಕ್ರಮ ದೃಢವಾಗಿರುವ ಗ್ರಾಪಂಗಳ ಮೇಲೆ ಯಾವುದೇ ಕ್ರಮ ಜರುಗಿಸದಿರುವುದು ಆಶ್ಚರ್ಯ ಮೂಡಿಸಿದೆ.

ಘನತ್ಯಾಜ್ಯ ವಿಲೇವಾರಿ ಘಟಕದ ಡಿಪಿಆರ್ ತಯಾರಿಕೆ, ವಸ್ತುಗಳ ಖರೀದಿಯಲ್ಲಿ ಮೂಗು ತೂರಿಸಿ, ಸ್ಥಳೀಯ ಗ್ರಾಪಂ ಅಧಿಕಾರ ಕಿತ್ತುಕೊಂಡು ವ್ಯಾಪಕ ಟೀಕೆಗೆ ಗುರಿಯಾಗಿದ್ದ ಜಿಪಂ ಅಧಿಕಾರಿಗಳು ಈಗ ಅಕ್ರಮ ಹೊರಬರಲಾರಂಭಿಸಿದ ಕೂಡಲೇ ಎಲ್ಲ ಜವಾಬ್ದಾರಿಯೂ ಗ್ರಾಪಂಗಳಿಗೆ ಇತ್ತು ಎಂದು ತಪ್ಪಿಸಿಕೊಳ್ಳುವ ಪ್ಲಾನ್ ಮಾಡಲಾರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಿಯೂ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲವಾದರೂ ಜಿಪಂ ದಾಖಲೆಗಳಲ್ಲಿ ಮಾತ್ರ ಯಶಸ್ವಿ ಅನುಷ್ಠಾನ ಎಂದಿದೆ. ಈಗಾಗಲೇ 76 ಘಟಕದ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಒಪ್ಪಿಕೊಂಡಿರುವ ಜಿಪಂ ಅವರ ವಿರುದ್ಧ ಯಾವ ಕ್ರಮಕೈಗೊಳ್ಳಲಿದೆ ಎಂಬ ಕುತೂಹಲವಿದೆ.

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಅಗತ್ಯವಾದ ವಾಹನ ಹಾಗೂ ಕಸದ ಬುಟ್ಟಿ ಖರೀದಿಯಲ್ಲಿ ಭಾರಿ ಅವ್ಯವಹಾರದ ಸದ್ದು ಕೇಳಿಬಂದಿದ್ದು, ಜಿಪಂ ಹಿರಿಯ ಅಧಿಕಾರಿಗಳಿಗೂ ಕಿಕ್‌ಬ್ಯಾಕ್ ಸಂದಾಯವಾಗಿರುವ ಆರೋಪವಿದೆ. ಗ್ರಾಪಂಗಳು ಅಗತ್ಯ ಹಾಗೂ ಅವಶ್ಯಕತೆಗೆ ಅನುಗುಣವಾಗಿ ತಯಾರಿಸಬೇಕಿದ್ದ ಡಿಪಿಆರ್‌ನ್ನು ಜಿಪಂ ಅಧಿಕಾರಿಗಳೇ ತಮಗಿಷ್ಟ ಬಂದಂತೆ ತಯಾರಿಸಿಕೊಂಡಾಗಲೇ ಯೋಜನೆಯಲ್ಲಿ ಅವ್ಯವಹಾರದ ವಾಸನೆ ಬಡಿದಿತ್ತು.

ಕೆಲವು ಗ್ರಾಪಂ ಪ್ರಜ್ಞಾವಂತ ಸದಸ್ಯರ ವಿರೋಧ ಲೆಕ್ಕಿಸದೆ ಹಿಂದಿನ ಸಿಇಒ ಹಠ ಹಿಡಿದು ಘಟಕ ಸ್ಥಾಪಿಸಲು ತರಾತುರಿ ತೋರಿದ್ದು ಅವ್ಯವಹಾರಕ್ಕೆ ಕಾರಣ ಎನ್ನಲಾಗಿದೆ. ಪ್ರಸ್ತುತ ಇರುವ ಸಿಇಒ ಕೆ.ವಿದ್ಯಾಕುಮಾರಿ ಅವ್ಯವಹಾರಗಳ ತನಿಖೆಗೆ ಮುಂದಾಗಿರುವುದು ಭ್ರಷ್ಟರ ನಿದ್ದೆಗೆಡಿಸಿದೆ.

ಆಟೋ ಖರೀದಿಗೆ ಸರ್ಕಾರದ ಮಾರ್ಗಸೂಚಿ ಇಲ್ಲದಿದ್ದರೂ ಟೆಂಡರ್ ಪ್ರಕಟಣೆ ಸಂದರ್ಭದಲ್ಲಿ ನೆಚ್ಚಿನ ಸಂಸ್ಥೆಗೆ ಅನುಕೂಲ ಮಾಡಿಕೊಟ್ಟಿರುವ ಸ್ವಹಿತಾಸಕ್ತಿ ಗ್ರಾಪಂಗಳಿಗೆ ನಷ್ಟವನ್ನುಂಟು ಮಾಡಿದ್ದು ಅವ್ಯವಹಾರದ ತನಿಖೆ ಅಗತ್ಯವಿದೆ.

ಖರೀದಿ ನಿಯಮ ಗಾಳಿಗೆ ತೂರಿದ ಜಿಪಂ : 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನವಸತಿಗಳಲ್ಲಿ ಒಂದು ಕುಟುಂಬಕ್ಕೆ ಎರಡು ಕಸದಬುಟ್ಟಿಗಳಂತೆ ಖರೀದಿಸಲಾಗಿದ್ದು, ಪ್ರಸ್ತುತ 76 ಗ್ರಾಪಂಗಳು ಕರ್ನಾಟಕ ಪಾರದರ್ಶಕ ಅಧಿನಿಯಮ -2000 (ಕೆಟಿಪಿಪಿ) ನಿಯಮ ಉಲ್ಲಂಸಿರುವುದು ದೊಡ್ಡ ಭ್ರಷ್ಟಾಚಾರಕ್ಕೆ ಕಾರಣವಾಗಿದೆ.

ಗ್ರಾಪಂನಲ್ಲಿ ಜಿಪಂ ಅಧಿಕಾರಿಗಳ ಹಸ್ತಕ್ಷೇಪದ ಕಾರಣ ಇಷ್ಟು ದೊಡ್ಡ ಅವ್ಯವಹಾರ ನಡೆದಿದೆ, ಕೆಳ ಹಂತದ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಆರಂಭದಲ್ಲಿಯೇ ವಿರೋಧ ವ್ಯಕ್ತಪಡಿಸಿದರೂ ಜಿಪಂ ಅಧಿಕಾರಿಗಳು ಹಠಮಾಡಿ ಹಣ ದುರುಪಯೋಗಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕಾಡಶೆಟ್ಟಿಹಳ್ಳಿ ಸತೀಶ್, ರಾಜ್ಯ ಸಂಚಾಲಕ, ರಾಜ್ಯ ಗ್ರಾಪಂ ಸದಸ್ಯರ ಮಹಾಒಕ್ಕೂಟ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆಗೆ ಅಗತ್ಯವಿದ್ದ ಬಕೆಟ್ ಖರೀದಿಯಲ್ಲಿ ನಿಯಮ ಉಲ್ಲಂಘನೆ ದೃಢವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಖರೀದಿ ಪ್ರಕ್ರಿಯೆ ರದ್ದುಪಡಿಸಲು ಆದೇಶಿಸಿದ್ದೇನೆ, ಕೆಟಿಪಿಪಿ ಕಾಯ್ದೆ ಅನುಸಾರ ಖರೀದಿಗೆ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಖರೀದಿ ನಡೆದಿರುವ 76 ಗ್ರಾಪಂಗಳಿಂದ ಸಮಗ್ರ ವರದಿ ಪಡೆದು ಅಕ್ರಮ ನಡೆದಿದ್ದರೆ ಕ್ರಮಕೈಗೊಳ್ಳಲಾಗುವುದು. ಡಾ.ಕೆ.ವಿದ್ಯಾಕುಮಾರಿ ಸಿಇಒ, ತುಮಕೂರು ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net