ಅಪೌಷ್ಟಿಕದಿಂದ ಗ್ರಾಮೀಣ ಪ್ರದೇಶ ಮುಕ್ತವಾಗಲಿ

27BK3
ಬಸವಕಲ್ಯಾಣ ತಾಲೂಕಿನ ಪರ್ತಾಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ನಮ್ಮ ನಡೆ ಹಳ್ಳಿ ಕಡೆ ಹಾಗೂ ವಲಯ ಮಟ್ಟದ ಪೋಷಣ್ ಕಾರ್ಯಕ್ರಮವನ್ನು ಜಿಪಂ ಸಿಇಒ ಡಾ.ಗಿರೀಶ ಬದೋಲೆ ಉದ್ಘಾಟಿಸಿದರು. ತಾಪಂ ಇಒ ರಮೇಶ ಸುಲ್ಫಿ, ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ್, ಪಿಡಿಒ ಚಂದ್ರಾಮ ಧೂಳಖೇಡ ಇತರರಿದ್ದರು.
Published on

ಬಸವಕಲ್ಯಾಣ: ಸಮಸ್ಯೆಗಳಿಂದ ಹಳ್ಳಿಗಳನ್ನು ಮುಕ್ತವಾಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ ಬದೋಲೆ ಹೇಳಿದರು.

ಪರ್ತಾಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಪಂ ಸಿಇಒ ನಮ್ಮ ನಡೆ ಹಳ್ಳಿ ಕಡೆ ಹಾಗೂ ವಲಯ ಮಟ್ಟದ ಪೋಷಣ್ ಕಾರ್ಯಕ್ರಮ ಉದ್ಘಾಟಿಸಿದ ಅವರು, ಗ್ರಾಮೀಣ ಪ್ರದೇಶ ಅಪೌಷ್ಟಿಕದಿಂದ ಮುಕ್ತವಾಗಬೇಕಾದ ಅಗತ್ಯವಿದೆ. ಮಕ್ಕಳು ಅಪೌಷ್ಟಿಕ ಸಮಸ್ಯೆಯಿಂದ ಮುಕ್ತಿ ಹೊಂದದಿದ್ದರೆ ಬೆಳೆವಣಿಯಲ್ಲಿ ನಾನಾ ಸಮಸ್ಯೆ ಕಂಡು ಬರುತ್ತವೆ ಎಂದರು.

ಜನರ ಸಮಸ್ಯೆ ಆಲಿಸಲು ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಉಳಿದವುಗಳ ಪರಿಹಾರಕ್ಕೆ ಸಂಬಂಧಿತರ ಗಮನಕ್ಕೆ ತಂದು ವಾರದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಸಿ ರಸ್ತೆ, ಚರಂಡಿ, ಆಟದ ಮೈದಾನ, ಶಾಲಾ ಕಂಪೌಂಡ್ ಇತರ ಸಮಸ್ಯೆಗಳನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಡಿ ವಿಶೇಷ ಯೋಜನೆ ರೂಪಿಸಿ ಕಾಮಗಾರಿ ಕೈಗೊಳ್ಳಲು ತಾಲೂಕು ಅಧಿಕಾರಿ ಹಾಗೂ ಪಿಡಿಒಗಳಿಗೆ ಸೂಚಿಸುವೆ ಎಂದರು.

ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ಉಪಾಧ್ಯಕ್ಷ ಸಂತೋಷ ಬಿರಾದಾರ್, ತಾಪಂ ಇಒ ರಮೇಶ ಸುಲ್ಫಿ, ತಾಪಂ ಎಡಿ ಅರುಣಕುಮಾರ ಪಾಟೀಲ್, ಪಿಡಿಒ ಚಂದ್ರಾಮ ಧೂಳಖೇಡ ಇತರರಿದ್ದರು.

ಪರ್ತಾಪುರ, ಚೌಡಿವಾಡಿ ಸರ್ಕಾರಿ ಶಾಲೆಗೆ ಭೇಟಿ: ಪರ್ತಾಪುರ ಸರ್ಕಾರಿ ಶಾಲೆ ಕುರಿತು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಡಾ.ಗಿರೀಶ ಬದೋಲೆ ಶಾಲೆಯಲ್ಲಿನ ಕುಡಿಯುವ ನೀರು, ಆಹಾರ ಮತ್ತು ತರಗತಿ ಕೋಣೆಗಳನ್ನು ಪರಿಶೀಲಿಸಿದರು. ಕೆಲ ಕೋಣೆ ಬಿರುಕು ಬಿಟ್ಟಿದ್ದನ್ನು ಕಂಡು ಶೀಘ್ರ ರಿಪೇರಿ ಮಾಡುವಂತೆ ಸೂಚಿಸಿದರಲ್ಲದೆ ಚೌಡಿವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿ ಕಟ್ಟಡ ಕಾಮಗಾರಿ ಪ್ರಾರಂಭಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿದರು. ಗ್ರಾಪಂ ಸದಸ್ಯ ಸುನೀಲರೆಡ್ಡಿ ಪಾಟೀಲ್, ಪಿಡಿಒ ಪ್ರಶಾಂತರೆಡ್ಡಿ ಮಾಲಿಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net