ಜೊಯಿಡಾ ಗಡ್ಡೆ ಗೆಣಸು ವಿಶ್ವ ಪ್ರಸಿದ್ಧಿ

JYD Gadde Genasu
Published on

ಜೊಯಿಡಾ: ಗಡ್ಡೆ ಗೆಣಸು ಬೆಳೆಯುವ ಪದ್ಧತಿ ಜೊಯಿಡಾದಲ್ಲಿದೆ. ಅಲ್ಲದೆ, ಇಲ್ಲಿನ ಗಡ್ಡೆ ಗೆಣಸು ವಿಶ್ವ ಪ್ರಸಿದ್ಧಿಯಾಗಿವೆ. ಇಲ್ಲಿನ ಜನರು ಎಂದಿಗೂ ಸಂಸ್ಕೃತಿ ಬಿಟ್ಟಿಲ್ಲ ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.

ಕಾಳಿ ಪ್ರವಾಸೋದ್ಯಮ ಸಂಸ್ಥೆ, ರೊಟರಿ ಕ್ಲಬ್ ದಾಂಡೇಲಿ, ಕುಣಬಿ ಸಮಾಜ ಸಂಘಹಾಗೂ ಗಡ್ಡೆ ಗೆಣಸು ಬೆಳೆಗಾರರ ಸಂಘ ಆಶ್ರಯದಲ್ಲಿ ಕುಣಬಿ ಭವನದ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ 11ನೇ ಗಡ್ಡೆ ಗೆಣಸು ಮೇಳ ಹಾಗೂ ಆಹಾರೋತ್ಸವ ಉದ್ಘಾಟಿಸಿ ಮಾತನಾಡಿದರು.

ಗಡ್ಡೆ ಗೆಣಸು ಆರೋಗ್ಯಕರ ಆಹಾರ. ಇನ್ನೂ ಹೆಚ್ಚಿನ ಗಡ್ಡೆ ಗೆಣಸು ಈ ಭಾಗದಲ್ಲಿ ಬೆಳೆಯಬೇಕು. ಕೇಂದ್ರ ಸರ್ಕಾರ ಗಡ್ಡೆ ಗೆಣಸು ಬೆಳೆಯುವವರಿಗೆ ಮಹತ್ವ ನೀಡಬೇಕು. ರೈತ ಬೆಳೆದ ಬೆಳೆಗೆ ಸಿಗಬೇಕಾದ ದರ ಸಿಗುತ್ತಿಲ್ಲ ಎನ್ನುವುದು ಬೇಸರದ ಸಂಗತಿ. ಗಡ್ಡೆ ಗೆಣಸು ಬೆಳೆಯುವವರಿಗೆ ನನ್ನ ಸಹಕಾರ ಎಂದಿಗೂ ಇದೆ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಒಂದೂಂದು ತಾಲೂಕು ಒಂದೊಂದು ವಿಶೇಷಗಳಿಂದ ಪ್ರಸಿದ್ಧಿಯಾಗಿದೆ. ಜೊಯಿಡಾ ಹಸಿರಿನಿಂದ ಕೂಡಿದ ತಾಲೂಕಾಗಿದ್ದು, ಪ್ರವಾಸೋದ್ಯಮದಿಂದಲೇ ಪ್ರಸಿದ್ಧಿ ಆಗಿಲ್ಲ. ಇಲ್ಲಿಯ ಗಡ್ಡೆ ಗೆಣಸುಗಳ ಮೂಲಕವೇ ವಿಶ್ವ ಪ್ರಸಿದ್ಧಿಯಾಗುತ್ತಿದೆ. ಇಲ್ಲಿಯ ಬೆಳೆ ಮಾರಾಟ, ಮಾರುಕಟ್ಟೆ ಮತ್ತು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮೂಲಕ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಶೇಷ ಖಾದ್ಯಗಳ ಮೇಳ

ಮೇಳದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ನೂರಾರು ವಿಧದ ಗಡ್ಡೆ ಗೆಣಸುಗಳು, ನೆಲ್ಲಿಕಾಯಿ, ಬಾಳೆ, ಹಾಗೂ ಸ್ಥಳೀಯ ರೈತರು ಬೆಳೆದ ಬೆಳೆಗಳನ್ನು ಮಾರಲು ತಂದಿದ್ದು ವಿಶೇಷವಾಗಿತ್ತು. ಗಡ್ಡೆ ಗೆಣಸುಗಳಿಂದ ಮಾಡಿದ ವಿವಿಧ ಖಾದ್ಯಗಳನ್ನು ಮಾರಾಟ ಮಾಡಲಾಯಿತು. ಸಾವಿರಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಆಯೋಜಕರಿಗೆ ಜನ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮ ಸಂಘಟಕರಾದ ಜಯಾನಂದ ಡೆರೆಕರ, ವಿನಯ ದೇಸಾಯಿ, ವಿಷ್ಣು ಡೇರೆಕರ, ಶಾಂತಾರಾಮ ಕಾಮತ, ರವಿ ರೇಡ್ಕರ, ಸುದರ್ಶನ ಹೆಗಡೆ, ನರಸಿಂಹ ಛಾಪಖಂಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net