

ಮಂಡ್ಯ: ಸ್ವಾಮಿ ವಿವೇಕಾನಂದ ಅವರ 161ನೇ ಜನ್ಮದಿನಾಚರಣೆ ಅಂಗವಾಗಿ ನೀಡಲಾಗುವ ‘ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ’ಗೆ ಏಳು ಜನರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ಕೃಷಿ ಮತ್ತು ಜಾನಪದ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೆ.ಆರ್.ಪೇಟೆ ತಾಲೂಕು ಹೊಸಹೊಳಲು ಗ್ರಾಮದ ಕೆ.ಎನ್.ಪದ್ಮಿನಿ ಪ್ರಸನ್ನಕುಮಾರ್, ನಾಗಮಂಗಲ ಟಿ.ಬಿ ಬಡಾವಣೆಯ ಎ.ಎಂ.ಸಚ್ಚಿನ್‌ಕುಮಾರ್, ಪಾಂಡವಪುರ ತಾಲೂಕು ಮೇಲುಕೋಟೆಯ ಕೆ.ಆರ್.ಗಿರೀಶ್, ಶ್ರೀರಂಗಪಟ್ಟಣ ತಾಲೂಕು ಹೆಬ್ಬಾಡಿಹುಂಡಿಯ ಪುಟ್ಟಸ್ವಾಮಿ, ಮಂಡ್ಯ ತಾಲೂಕು ಬೇವಿನಹಳ್ಳಿಯ ಬಿ.ಎಸ್.ಚಂದ್ರಶೇಖರ್, ಮದ್ದೂರು ತಾಲೂಕು ಹೊಸಗಾವಿ ಗ್ರಾಮದ ಎಂ.ಪಿ.ಸೋನು ಹಾಗೂ ಮಳವಳ್ಳಿ ತಾಲೂಕು ದೇವಿಪುರ ಗ್ರಾಮದ ಶೇಖರ್ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಎಸ್.ಬಿ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಜ.12ರಂದು ಬೆಳಗ್ಗೆ 10.30ಕ್ಕೆ ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿರುವ ಸಮಾರಂಭವನ್ನು ಶಾಸಕ ರವಿಕುಮಾರ್ ಗಣಿಗ ಉದ್ಘಾಟಿಸಲಿದ್ದಾರೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಂತೆಯೇ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಿಡಿಪಿಯು ಸಿ.ಚಲುವಯ್ಯ ಬಹುಮಾನ ವಿತರಿಸಲಿದ್ದು, ಮೈಸೂರು ಜೆಎಸ್‌ಎಸ್ ಉನ್ನತ ಶಿಕ್ಷಣ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜ್ ಈರೇಗೌಡ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ವೇಳೆ ಜಿಲ್ಲಾ ಯುವ ಪರಿಷತ್‌ನ ಪದಾಧಿಕಾರಿಗಳಾಗಿ ಕಾರಸವಾಡಿ ಮಹದೇವು ಮತ್ತು ತಂಡ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ವಿವರಿಸಿದರು.
ಪರಿಷತ್‌ನ ಜಯಶೀಲಾ, ಮಂಜುಳಾ, ಸುರೇಶ್, ನಾಗರಾಜು, ಕೀಲಾರ ಕೃಷ್ಣೇಗೌಡ, ಮಂಜೇಶ್ ಇದ್ದರು.