ತುಮಕೂರು ಜಿಲ್ಲಾ ಪಂಚಾಯಿತಿ ಸಭೆ ಮತ್ತೆ ಮುಂದೂಡಿಕೆ ; ಕೋರಂ ಕೊರತೆಯಿಂದ ರದ್ದು

25TMK_ZP_Meeting
Published on

ತುಮಕೂರು: 49 ಸದಸ್ಯರ ಅವಿಶ್ವಾಸದ ನಡುವೆಯೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಲತಾ ಕರೆದಿದ್ದ ಸರ್ವಸದಸ್ಯರ ಸಾಮಾನ್ಯ ಸಭೆ ಶುಕ್ರವಾರ ಕೋರಂ ಕೊರತೆಯಿಂದ ಮತ್ತೆ ರದ್ದಾಯಿತು. ಬಹುಮತ ಸಾಬೀತಿಗೆ ದಿನಾಂಕ ನಿಗದಿಯಾಗಿದ್ದರೂ ಸಭೆ ಕರೆದ ಅಧ್ಯಕ್ಷೆ ಹಾಗೂ ಸಿಇಒ ವಿರುದ್ಧ ಸದಸ್ಯರು ಆಕ್ರೋಶ ಹೊರಹಾಕಿದರು.

ಶುಕ್ರವಾರ ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆಯಲ್ಲಿ ಮಧುಗಿರಿ ತಾಲೂಕಿನ ನಾಲ್ವರು ಕಾಂಗ್ರೆಸ್ ಸದಸ್ಯರು ಹಾಜರಾಗಿದ್ದರು. ಉಳಿದೆಲ್ಲ್ಲ ಸದಸ್ಯರು ಗೈರಾಗುವ ಮೂಲಕ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಮುಂದುವರಿಸಿದರು. ಮಧ್ಯಾಹ್ನ 12ರವರೆಗೂ ಕೋರಂಗಾಗಿ ಕಾದ ಅಧ್ಯಕ್ಷೆ ಲತಾ, ಸದಸ್ಯರು ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ೋಷಿಸಿ ಹೊರನಡೆದರು. ಇದಕ್ಕೂ ಮೊದಲು ಎರಡು ಸಲ ಬೆಲ್ ಬಾರಿಸಿದ್ದರು.

ಶಿರಾ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಆರಂಭವಾಗಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಹಳಸಿದೆ, ಅಧ್ಯಕ್ಷೆ ವಿರುದ್ಧ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಿರುವುದು ಲತಾ ಸಿಟ್ಟಿಗೆ ಕಾರಣವಾಗಿದೆ, ರಾಜಕೀಯ ದ್ವೇಷಕ್ಕಾಗಿಯೇ ಅವಿಶ್ವಾಸ ಮಂಡನೆಯಾಗಿದ್ದು ಅದರಲ್ಲಿ ಬಹುತೇಕರ ಸಹಿ ಕೂಡ ನಕಲಿ ಎಂದು ಲತಾ ಆರೋಪಿಸಿದರು.

ಅ.7ರಂದು ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ಅವಿಶ್ವಾಸ ನಿರ್ಣಯದ ಸಭೆ ನಡೆಯಲಿದ್ದು ಇಲ್ಲಿ ಅಧ್ಯಕ್ಷರ ಪದಚ್ಯುತಿಯಾದರೆ ಮುಂದಿನ 15 ದಿನದಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಸಬೇಕಿದೆ. ಯಾವ ಪಕ್ಷಕ್ಕೂ ಬಹುಮತವಿಲ್ಲದ ಜಿಪಂನಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಲತಾ ಅವರಿಗೆ ಬೆಂಬಲ ನೀಡಲು ಕಾಂಗ್ರೆಸ್ ಕೂಡ ಒಪ್ಪಿಗೆ ಸೂಚಿಸಿದ್ದು ಬಿಜೆಪಿಗೆ ಬೆಂಬಲಿಸದಂತೆ ಸದಸ್ಯರಿಗೆ ವಿಪ್ ನೀಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.

ಉಪಾಧ್ಯಕ್ಷೆ ಶಾರದಾ ರಾಜೀನಾಮೆಗೆ ಪಟ್ಟು!: ಬಹುತೇಕ ಸದಸ್ಯರ ವಿರೋಧದ ನಡುವೆಯೂ ಅಧ್ಯಕ್ಷ ಗಾದಿಯಲ್ಲಿ ಮುಂದುವರಿದಿರುವ ಲತಾ, ಮೈತ್ರಿ ಧರ್ಮದಂತೆ ಉಪಾಧ್ಯಕ್ಷೆ ಬಿಜೆಪಿಯ ಶಾರದಾ ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಆರ್‌ಡಿಪಿಆರ್ ಪ್ರಾದೇಶಿಕ ಆಯುಕ್ತರು ಈಗಾಗಲೇ ನೋಟಿಸ್ ನೀಡಿದ್ದು ಇದರ ವಿರುದ್ಧ ಅಧ್ಯಕ್ಷೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದಸ್ಯರ ನಡುವೆಯ ಹಗ್ಗ್ಗಜಗ್ಗಾಟದ ನಡುವೆ ಅಭಿವೃದ್ಧಿ ಮರೀಚಿಕೆಯಾಗಿದೆ.

ಕಾಂಗ್ರೆಸ್, ಜೆಡಿಎಸ್ ಮುನಿಸು: ಅಸಮಾಧಾನಿತ ಸದಸ್ಯರೆಲ್ಲಾ ಅಧ್ಯಕ್ಷೆ ಲತಾ ಹಾಗೂ ಉಪಾಧ್ಯಕ್ಷೆ ಶಾರದಾ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಚರ್ಚಿಸಿ ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿದ್ದರು. ಆದರೆ, ಬಿಜೆಪಿ ಕೊನೆಯ ಕ್ಷಣದಲ್ಲಿ ತಂತ್ರ ಮಾಡಿ ಕೇವಲ ಅಧ್ಯಕ್ಷೆ ಲತಾ ವಿರುದ್ಧ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸ್ತಾವನೆ ಸಲ್ಲಿಸಿರುವುದು ಕಾಂಗ್ರೆಸ್, ಜೆಡಿಎಸ್ ಸದಸ್ಯರ ಮುನಿಸಿಗೆ ಕಾರಣವಾಗಿದ್ದು, ಅಸಮಾಧಾನಿತ ಸದಸ್ಯರ ಒಗ್ಗಟ್ಟು ಚದುರಿದೆ. ಬಿಜೆಪಿ ಉಪಾಧ್ಯಕ್ಷೆ ಪರವಾಗಿ ಮತ ಚಲಾಯಿಸಬಾರದು ಎಂದು ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಲಿದೆ ಎನ್ನಲಾಗಿದೆ.

ಅವಿಶ್ವಾಸ ಮಂಡನೆಗೆ ಅ.7ರಂದು ಕ್ಯಾಲೆಂಡರ್ ಹಾಕಿರುವಾಗ ಸಾಮಾನ್ಯ ಸಭೆ ಕರೆದಿದ್ದು ಸರಿಯಲ್ಲ, ನಮ್ಮ ಬೇಡಿಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಇಬ್ಬರೂ ಕೆಳಗಿಳಿಯಬೇಕು, ಬಿಜೆಪಿ ಸದಸ್ಯರು ಬುದ್ಧಿವಂತಿಕೆ ತೋರಿಸಿದ್ದಾರೆ, ಅ.7ರ ಸಭೆಯಲ್ಲಿ ಕಾಂಗ್ರೆಸ್ ನಿಲುವು ಬಹಿರಂಗವಾಗಲಿದೆ. ಕೆಂಚಮಾರಯ್ಯ ಜಿಪಂ ಕಾಂಗ್ರೆಸ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net