ನಿಗದಿತ ಕಾಲಮಿತಿಯೊಳಗೆ ಪಿಡಿಒಗಳು ಯೋಜನೆಯ ಪ್ರಗತಿ ಸಾಧಿಸಲಿ

KNK MEETING
ಕನಕಗಿರಿಯ ಪದವಿ ಕಾಲೇಜಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒಗಳು, ನಾನಾ ಇಲಾಖೆಯ ಅಧಿಕಾರಿ, ಸಿಬ್ಬಂದಿ.
Published on

ಕನಕಗಿರಿ: ನಿಗದಿತ ಕಾಲಮಿತಿಯೊಳಗೆ ವಿವಿಧ ಯೋಜನೆಯ ಪ್ರಗತಿಯನ್ನು ಸಾಧಿಸಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ ಸೂಚಿಸಿದರು.

ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಪಂನಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ಬರುವ ವಿವಿಧ ಕಾಮಗಾರಿಗಳ ಸಮಗ್ರ ಅನುಷ್ಠಾನವನ್ನು ಪಾರದರ್ಶಕ, ಕಾಲಮಿತಿಯೊಳಗೆ ಮುಗಿಸಬೇಕು ಎಂದರು.

ಕಾಮಗಾರಿ ಸ್ಥಳದಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಪರಿಹರಿಸುವ ಕ್ರಮ ಕೈಗೊಳ್ಳಬೇಕು. ಎನ್‌ಎಂಎಂಎಸ್ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಬೇಕು. ಆ.15ರಂದು ಶಿಶುಪಾಲನಾ ಕೇಂದ್ರಗಳನ್ನು ತೆರೆಯಬೇಕಿರುವುದರಿಂದ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಅಮೃತ ಸರೋವರ ಕೆರೆಗಳಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮೇಟಿಗಳ ನೋಂದಣಿ ಸೇರಿ ನರೇಗಾ ಯೋಜನೆಯ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ನೆರೆ ಸಂತ್ರಸ್ತ ಪುನರ್ವಸತಿ ಯೋಜನೆ, ಪಿಎಂಎವೈಜಿ ವಸತಿ ಯೋಜನೆ, ನಿವೇಶನ ಹಂಚಿಕೆ ಕುರಿತು ಪಿಡಿಒಗಳಿಂದ ಮಾಹಿತಿ ಪಡೆದು, ಪ್ರಗತಿ ಸಾಧಿಸಲು ಸೂಚಿಸಿದರು.

ತಾಪಂ ಇಒ ಚಂದ್ರಶೇಖರ್ ಕಂದಕೂರು, ಸಹಾಯಕ ನಿರ್ದೇಶಕರು (ಪಂ.ರಾ) ವೀರಣ್ಣ ನಕ್ರಳ್ಳಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪಿಡಿಒಗಳಾದ ನಾಗಲಿಂಗಪ್ಪ, ಅಮರೇಶ ರಾಠೋಡ್, ಸಂಶೀರ್ ಅಲಿ, ನಾಗೇಶ ಬಡಿಗೇರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net