ಮಹಿಳಾ ದಿನವನ್ನು ವಿನೂತನವಾಗಿ ಆಯೋಜಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

Zilla Panchayat CEO meeting Mandya
Published on

ಮಂಡ್ಯ: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಾ.8ಕ್ಕೆ ಸೀಮಿತ ಮಾಡಬೇಡಿ. ಬದಲಿಗೆ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ, ಸಂವಾದ, ವಿಚಾರ ಸಂಕಿರಣ ಆಯೋಜಿಸಿ. ಅಂತೆಯೇ ಏಪ್ರಿಲ್ನಲ್ಲಿ ಜಿಲ್ಲಾಮಟ್ಟದಲ್ಲಿ ಅರ್ಥಪೂರ್ಣವಾಗಿ ಮಹಿಳಾ ದಿನವನ್ನು ಆಚರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.

ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟದ ರೀತಿಯ ಸುಲಭವಾದ ಸ್ಪರ್ಧೆ ಆಯೋಜಿಸುವ ಬದಲು ಕ್ರಿಕೆಟ್, ಚಿತ್ರಕಲಾ, ಚರ್ಚಾ ಸ್ಪರ್ಧೆ ಮಾಡಲು ಯೋಜನೆ ರೂಪಿಸಿ ಎಂದರು.

ಸ್ಪರ್ಧೆಗಳನ್ನು ಗ್ರಾಮ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟಿಸಿ ನಂತರ ಜಿಲ್ಲಾಮಟ್ಟದಲ್ಲಿ ಆಯೋಜಿಸಬೇಕು. ಇದರಿಂದ ಆಸಕ್ತ ಮಹಿಳೆಯರು ಭಾಗವಹಿಸಲು ಅವಕಾಶ ಸಿಗುತ್ತದೆ. ಕ್ರೀಡೆ, ಕಲೆ, ಸಾಹಿತ್ಯ, ಉದ್ದಿಮೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಮಹಿಳೆಯರನ್ನು ಗುರುತಿಸಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಬೇಕು. ಇದರಿಂದ ಮಹಿಳೆಯಲ್ಲಿ ಸಾಧನೆ ಮಾಡುವ ಮನೋಭಾವ ಬೆಳೆಯುತ್ತದೆ ಎಂದು ಸಲಹೆ ನೀಡಿದರು.

ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಕಾನೂನು ಅರಿವು, ನಾಯಕತ್ವ ಗುಣ ಬೆಳೆಸುವ ಕಾರ್ಯಕ್ರಮವನ್ನು ಹೆಚ್ಚೆಚ್ಚು ಆಯೋಜಿಸಿ. ಈ ಕುರಿತು ಅಧಿಕಾರಿಗಳು ಚರ್ಚಿಸಿ ಯೋಜನೆ ಸಿದ್ಧಪಡಿಸಿ ಸಲ್ಲಿಸಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿನಿಯರು, ವಿವಿಧ ಇಲಾಖೆಗಳ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಭಾಗವಹಿಸುವಂತೆ ಪ್ರೋತ್ಸಾಹಿಸಿ. ವಿಜೇತರಾದವರಿಗೆ ಇಲಾಖಾ ಅಧಿಕಾರಿಗಳೊಂದಿಗೆ ಒಂದು ದಿನ ಕಾರ್ಯನಿರ್ವಹಣೆ ನೋಡುವ ಅವಕಾಶವನ್ನು ಕಲ್ಪಿಸಿಕೊಡಬಹುದು. ಇದರಿಂದ ಪ್ರೇರಣೆಗೊಂಡು ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಭಾಗವಹಿಸುತ್ತಾರೆ ಎಂದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಆನಂದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net