ಅಧಿಕಾರಿ, ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ

Zilla Panchayat CEO meeting Mandya
Published on

ಮಂಡ್ಯ: ಸರ್ಕಾರಿ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಮಾತ್ರವಲ್ಲದೆ ನಿಗದಿತ ಸಮಯಕ್ಕೆ ಹಾಜರಾಗಿ ಸಾರ್ವಜನಿಕ ಕೆಲಸಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರು ಆ.2ರಂದು ಬೆಂಗಳೂರಿನಲ್ಲಿ ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ನಗರದ ಜಿಪಂ ಕಚೇರಿಯ ಮಿನಿ ಸಭಾಂಗಣದಲ್ಲಿ ತಾಪಂ ಇಒಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು, ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು, ತಾಪಂ ಪಂಚಾಯತ್‌ಗಳ ಸಹಾಯಕ ನಿರ್ದೇಶಕರು ಹಾಗೂ ಜಿಪಂ ಶಾಖಾ ಮುಖ್ಯಸ್ಥರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯತ್‌ಗಳ ತೆರಿಗೆ ವಸೂಲಾತಿ, ಆಸ್ತಿಗಳ ಸಮೀಕ್ಷೆ, ಇ-ಸ್ವತ್ತು ಮತ್ತು ಐಪಿಜಿಆರ್‌ಎಸ್ ಅರ್ಜಿಗಳ ವಿಲೇವಾರಿ ಮಾಹಿತಿ ಪಡೆದು ಆದ್ಯತೆ ಮೇರೆಗೆ ಕಾಲಮಿತಿಯೊಳಗೆ ಇ-ಸ್ವತ್ತು ಹಾಗೂ ಸಾರ್ವಜನಿಕ ಕುಂದು ಕೊರತೆ ಅರ್ಜಿಯನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮ ವಹಿಸಬೇಕೆಂದ ಸಿಇಒ, ಡಿಜಿಟಲ್ ಗ್ರಂಥಾಲಯಗಳ ನಿರ್ವಹಣೆ, ಇಲಾಖಾ ವಿಚಾರಣೆ ವಿವರ, 14 ಮತ್ತು 15ನೇ ಹಣಕಾಸಿನ ಪ್ರಗತಿ ಪರಿಶೀಲಿಸಿದರು.

ಕಾವೇರಿ ಹಾಗೂ ಹೇಮಾವತಿ ನದಿ ಪಾತ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಈ ನದಿಗಳ ಪಾತ್ರದಲ್ಲಿ ಬರುವ ಗ್ರಾಮ ಪಂಚಾಯಿತಿಯಲ್ಲಿ ವಿಪತ್ತು ನಿರ್ವಹಣೆ ಸಂಬಂಧ ಅಗತ್ಯ ಕ್ರಮವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಅದರಂತೆ ಪ್ರವಾಹ ಪರಿಸ್ಥಿತಿ ಕಡಿಮೆಯಾಗುವವರೆಗೂ ಸಹ ನದಿ ಪಾತ್ರದ ಗ್ರಾಮ ಪಂಚಾಯತ್‌ಗಳಲ್ಲಿ ಎಚ್ಚರಿಕೆ ವಹಿಸಿ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವಂತೆ ಪಿಡಿಒಗಳಿಗೆ ಸೂಚಿಸಬೇಕು. ಮಹಾತ್ಮಗಾಂಧಿ ನರೇಗಾ ಯೋಜನೆ, ಜಲ ಜೀವನ್‌ಮಿಷನ್ ಯೋಜನೆ, ಸ್ವಚ್ಛ ಭಾರತ್ ಮಿಷನ್, ಬಾಪೂಜಿ ಸೇವಾ ಕೇಂದ್ರದ ವಿಷಯಗಳಿಗೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಪ್ರಗತಿ ಸಾಧಿಸಬೇಕು. ತಾಪಂ ಇಒ ಹಂತದಲ್ಲಿ ಪ್ರತಿ ತಿಂಗಳು ಪಿಡಿಒಗಳೊಂದಿಗೆ ಸಭೆ ಮಾಡಬೇಕು. ಅಂತೆಯೇ ಸಭಾ ನಡವಳಿ ಹಾಗೂ ಅನುಪಾಲನಾ ವರದಿಯನ್ನು 2 ದಿನಗಳೊಳಗಾಗಿ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಸಂಜೀವಪ್ಪ, ಉಪ ಕಾರ್ಯದರ್ಶಿಗಳಾದ ಆನಂದ್, ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net