

ಗಂಗಾವತಿ: ಸಿಎಂ ಸಿದ್ದರಾಮಯ್ಯ ಪ್ರವಾಸದ ವೇಳೆ ನಗರದಲ್ಲಿ ಜಾರಿಯಲ್ಲಿದ್ದ ಝೀರೋ ಟ್ರಾಫಿಕ್ ನಿಯಮವನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಉಲ್ಲಂಸಿರುವ ವಿಡಿಯೋ ವೈರಲ್ ಆಗಿದ್ದು, ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ.
ಮಾನ್ವಿ ಕಾರ್ಯಕ್ರಮ ಪೂರ್ಣಗೊಳಿಸಿ ಗಿಣಿಗೇರಾ ಏರ್‌ಸ್ಟ್ರಿಪ್‌ಗೆ ಸಿಎಂ ಸಿದ್ದರಾಮಯ್ಯ ತೆರಳುವಾಗ ನಗರದಲ್ಲಿ ಝೀರೋ ಟ್ರಾಫಿಕ್ ಸೂಚನೆ ಪೊಲೀಸ್ ಇಲಾಖೆ ನೀಡಿತ್ತು. ಸಿಎಂ ಮತ್ತು ಬೆಂಗಾವಲು ಪಡೆ ಹೋಗುವವರೆಗೂ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಆದರೆ ವಡ್ಡರಹಟ್ಟಿಯಲ್ಲಿ ಬಿಜೆಪಿ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಪೂರ್ಣಗೊಳಿಸಿ ಬರುವಾಗ ನಗರದ ಸಿಬಿಎಸ್ ವೃತ್ತದಲ್ಲಿ ಝೀರೋ ಟ್ರಾಫಿಕ್ ಹಿನ್ನೆಲೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು.
ನಿಲ್ಲಲು ಒಪ್ಪದ ಶಾಸಕ ಗಾಲಿ ಜನಾರ್ದನರೆಡ್ಡಿ, ಡಿವೈಡರ್ ಹತ್ತಿಸಿ, ಸಿಎಂ ಬರುವ ವಾಹನದ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದರು. ಕೆಲ ಸೆಕೆಂಡ್‌ಗಳಲ್ಲಿ ಬೆಂಗಾವಲು ಪಡೆ ವಾಹನ ಪಾಸ್ ಆಗಿದ್ದು, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ವಿಚಲಿತರಾದ ಸ್ಥಳೀಯ ಪೊಲೀಸರು ಅಸಹಾಯಕರಾಗಿದ್ದು, ರೆಡ್ಡಿ ವಾಹನ ಡಿವೈಡರ್ ಹತ್ತಿ ಇಳಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೆಡ್ಡಿ ನಿರ್ಧಾರಕ್ಕೆ ಬೆಂಬಲಿಗರು ಸರಿ ಎಂದಿದ್ದು, ಜೈ ರೆಡ್ಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಸಾಂವಿಧಾನಿಕ ಹುದ್ದೆಗೆ ಮರ್ಯಾದೆ ಕೊಡದಿರುವ ಶಾಸಕ ಗಾಲಿ ಜನಾರ್ದನರೆಡ್ಡಿ ವರ್ತನೆಗೆ ವಿರೋಧಿಗಳು ಕಿಡಿಕಾರಿದ್ದು, ಅಪ್ರಬುದ್ಧರಂತೆ ವರ್ತಿಸದಂತೆ ಪ್ರತಿಕ್ರಿಯಿಸಿದ್ದಾರೆ. ಘಟನೆ ಗಂಭೀರ ಪರಿಗಣಿಸಿದ ಸ್ಥಳೀಯ ಪೊಲೀಸರು ಶಾಸಕ ಗಾಲಿ ಜನಾರ್ದನರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಒತ್ತಡವೂ ಹೆಚ್ಚಾಗಿದೆ.