ವಾಹನದಲ್ಲಿ ಹುಚ್ಚಾಟ ನಡೆಸಿದವರೆ ಮೇಲೆ ಕೇಸ್

web 4
Published on

ಬಣಕಲ್: ಜೀರೋ ಟ್ರಾಫಿಕ್ ನೆಪದಲ್ಲಿ ಬೇಕಾಬಿಟ್ಟಿ ವಾಹನ ಓಡಿಸಿ ಸಂಚಾರಕ್ಕೆ ಅಡಚಣೆ ಮಾಡಿರುವ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಬಣಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರೋಗಿಗೆ ತಕ್ಷಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ಜನರನ್ನು ನಂಬಿಸಿ ಪುತ್ತೂರು, ಚಾರ್ವಡಿ, ಕೊಟ್ಟಿಗೆಹಾರ, ಮೂಡಿಗೆರೆ ಹ್ಯಾಂಡ್​ಪೋಸ್ಟ್, ಬೇಲೂರು ರಸ್ತೆ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ.

ತುರ್ತು ಶಸ್ತ್ರ ಚಿಕಿತ್ಸೆ ಎಂದು ಜೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ ಹೋದ ರೋಗಿಗೆ ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ತುರ್ತು ಚಿಕಿತ್ಸೆ ಅಗತ್ಯವಿಲ್ಲದಿದ್ದರೂ ಜೀರೋ ಟ್ರಾಫಿಕ್​ನಲ್ಲಿ ಕರೆದ್ಯೊಯಲಾಗಿದೆ. ಇದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.

ಡಿ.2 ರಂದು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಜೀರೋ ಟ್ರಾಫಿಕ್ ಮಾಡಿಸಿ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಆಂಬುಲೆನ್ಸ್ ಸಹಿತ ಇತರೆ ನಾಲ್ಕು ಖಾಸಗಿ ವಾಹನಗಳು ಅತ್ಯಂತ ವೇಗವಾಗಿ ಸಾಗಿ ಇತರರಲ್ಲಿ ಭೀತಿ ಮೂಡಿಸಿದ್ದಾರೆ ಎಂದು ಹೇಳಿದ್ದಾರೆ.

ಜೀರೋ ಟ್ರಾಫಿಕ್​ನಲ್ಲಿ ಕರೆದುಕೊಂಡು ಹೋದ ಆಂಬುಲೆನ್ಸ್​ಗೆ ಸರಿಯಾದ ದಾಖಲಾತಿ ಇಲ್ಲ ಹಾಗೂ ಎಫ್​ಸಿ ನವೀಕರಣವಾಗಿಲ್ಲ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net