

ಮಂಜುನಾಥ ಎಸ್. ಅಂಗಡಿ ಧಾರವಾಡ
ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಮರಳಿ ಬಾ ಶಾಲೆಗೆ, ದಾಖಲಾತಿ ಆಂದೋಲನ ಸೇರಿ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಗ್ರಾಮೀಣ ಅಲ್ಲದೆ ನಗರ, ಪಟ್ಟಣ ಪ್ರದೇಶಗಳಲ್ಲೂ ಸಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಸಾಗಿದೆ. 2025- 26ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ 11 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಶೂನ್ಯ ದಾಖಲಾಗಿರುವುದು ಖೇದಕರ.
* ಶೂನ್ಯ ದಾಖಲಾತಿ ಶಾಲೆಗಳು:
ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಽಕಾರಿ ವ್ಯಾಪ್ತಿಯಲ್ಲಿ ದಾಸನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 2 ವರ್ಷಗಳಿಂದ ಮಕ್ಕಳಿಲ್ಲದೆ ಬಂದ್ ಆಗಿದೆ. ಉಳಿದಂತೆ ಅಳ್ನಾವರ ವಿದ್ಯಾನಗರದದ ನಂದೀಶ್ವರ ಅನುದಾನಿತ ಶಾಲೆ, ಹು-ಧಾ ಪಾಲಿಕೆ ವ್ಯಾಪ್ತಿಯ ಗುಡ್‌ಶೆಡ್ ರಸ್ತೆಯ ಕರ್ನಾಟಕ ಟಿಎಂ ಶಾಲೆ, ಹುಬ್ಬಳ್ಳಿಯ ಗುಡ್‌ಶೆಡ್ ರಸ್ತೆಯ ಕೆಟಿಎಂ ಶಾಲೆ, ಅಳ್ನಾವರದ ಮೌಲಾನಾ ಆಜಾದ್ ಮಾಡೆಲ್ ಸ್ಕೂಲ್, ಅಣ್ಣಿಗೇರಿಯ ಮೌಲಾನಾ ಆಜಾದ್ ಮಾಡೆಲ್ ಸ್ಕೂಲ್, ಶ್ರೀಮತಿ ನಿರ್ಮಲಾ ಕೆ. ಠಕ್ಕರ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ , ನೇತ್ರಾವತಿ ಗ್ಲೋಬಲ್ ಸ್ಕೂಲ್, ವಿವೇಕಾನಂದ ಎಚ್‌ಪಿಎಸ್ ನವಲಗುಂದ, ಅಣ್ಣಿಗೇರಿಯ ಶ್ರೀಮತಿ ಬಿ.ಕೆ. ಅಂಗಡಿ ಇಂಗ್ಲಿಷ್ ಮೀಡಿಯಂ, ಕನ್ನಡ ಮೀಡಿಯಂ ಹೈಸ್ಕೂಲ್, ಅಣ್ಣಿಗೇರಿಯ ಸೆಂಟ್ರಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಡಿಸಿಎಂ ಎಜುಕೇಷನ್ ಸೊಸೈಟಿ ಗುರುಕುಲ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ಈ ಬಾರಿ ಮಕ್ಕಳ ದಾಖಲಾತಿ ಸೊನ್ನೆಯಾಗಿದೆ. ಶಿಕ್ಷಕರ ನಿಯೋಜನೆ: ಮಕ್ಕಳೇ ಇಲ್ಲದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಈಗಾಗಲೇ ಅಕ್ಕಪಕ್ಕದ ಶಾಲೆಗಳಿಗೆ ನಿಯೋಜನೆ ಮಾಡಲಾಗಿದೆ.
* ಸರ್ಕಾರದ ಮಟ್ಟದಲ್ಲಿ ದೂರಾಲೋಚನೆ:
ಶೂನ್ಯ ಮತ್ತು ಕಡಿಮೆ ಮಕ್ಕಳು ದಾಖಲಾಗಿರುವ ಶಾಲೆಗಳು ಮುಂದಿನ ದಿನಗಳಲ್ಲಿ ಬಂದ್ ಆಗುವುದು ನಿಶ್ಚಿತ. ಅಂಥ ಶಾಲೆಗಳನ್ನು ವಿಲೀನಗೊಳಿಸಿ `ಮಾದರಿ ಶಾಲೆ'ಗಳನ್ನು ಮಾಡುವ ಚಿಂತನೆ ಇದೆ. ಇದರನ್ವಯ 3 ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು (ಶಿಕ್ಷಕರೂ ಸೇರಿ) ಒಂದೆಡೆ ವಿಲೀನಗೊಳಿಸಿ ಸುಸಜ್ಜಿತ ಶಾಲೆಯನ್ನು ತೆರೆಯುವುದು. ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂಥ ಭೌತಿಕ ಸೌಲಭ್ಯ, ವಾಹನ ಸೌಕರ್ಯ, ಎಲ್ಲ ವಿಷಯಗಳಿಗೂ ಶಿಕ್ಷಕರು ಲಭ್ಯವಾಗುವಂತೆ ನೋಡಿಕೊಳ್ಳುವ ಯೋಜನೆ ಇದೆ.
* 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು:
ಕೆಲ ವರ್ಷಗಳ ಹಿಂದೆ 10 ಮತ್ತು ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುವ ಮಾತು ಕೇಳಿಬಂದಿತ್ತು. ಆದರೆ, ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು. ಜಿಲ್ಲೆಯಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಗೋವನಕೊಪ್ಪ ಉರ್ದು ಶಾಲೆಯಲ್ಲಿ ಕೇವಲ 6 ಮಕ್ಕಳಿದ್ದಾರೆ. ಸರ್ಕಾರಿ ಮರಾಠಿ ಶಾಲೆ ಅಳ್ನಾವರದಲ್ಲಿ 9, ಮಾರಡಗಿಯ ಸರ್ಕಾರಿ ಉರ್ದು ಶಾಲೆಯಲ್ಲಿ 10, ಧಾರವಾಡ ಶಹರದ ದಾನುನಗರ ಶಾಲೆ 8, ಹುಬ್ಬಳ್ಳಿಯ ತೆಲುಗು ಗಾಂಽವಾಡ ಶಾಲೆಯಲ್ಲಿ 7, ಹುಬ್ಬಳ್ಳಿ ಮರಾಠಿ ಹೊಸ ಕಿಲ್ಲಾ ಶಾಲೆ ನಂ. 1ರಲ್ಲಿ 9, ಶಿರಗುಪ್ಪಿ ಉರ್ದು ಶಾಲೆಯಲ್ಲಿ 3, ಬ್ಯಾಹಟ್ಟಿಯ ಉರ್ದು ಶಾಲೆಯಲ್ಲಿ 7, ಹಳೇಗಬ್ಬೂರ ಶಾಲೆಯಲ್ಲಿ 10, ಕೋಳಿವಾಡ ಉರ್ದು ಶಾಲೆಯಲ್ಲಿ 10, ಮಂಟೂರ ಶಾಲೆಯಲ್ಲಿ 10, ಗರುಡಹೊನ್ನಳ್ಳಿ ಶಾಲೆಯಲ್ಲಿ 10, ಶಲವಡಿ ಉರ್ದು ಬಾಲಕರ ಶಾಲೆಯಲ್ಲಿ 5, ಹುಬ್ಬಳ್ಳಿ ಸೇಂಟ್ ಪೀರ‍್ಸ್ ಶಾಲೆಯಲ್ಲಿ 2 (ಪ್ರೆÊಮರಿ), ಹುಬ್ಬಳ್ಳಿ ಸೇಂಟ್ ಪೀರ‍್ಸ್ ಶಾಲೆಯಲ್ಲಿ 2 (ಸೆಕೆಂಡರಿ), ಯುನೈಟೆಡ್ ತೆಲುಗು ಶಾಲೆಯಲ್ಲಿ 10, ನವಲಗುಂದದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6, ಸೂರ್ತಿ ಎಲ್‌ಪಿಎಸ್ ಪಾಂಡುರ0ಗನಗರ ಶಾಲೆಯಲ್ಲಿ 7, ಎಚ್‌ಎಲ್‌ಬಿ ಶಿಕ್ಷಣ ಸಂಸ್ಥೆ ಎಚ್‌ಪಿಎಸ್ ಕನ್ನಡ 4, ವಿವೇಕಾನಂದ ಪಬ್ಲಿಕ್ ಸ್ಕೂಲ್ ಹೆಬ್ಬಾಳದಲ್ಲಿ 8, ಅರೆಕುರಹಟ್ಟಿಯ ಅನುಷಾ ಎಚ್‌ಆರ್‌ಇಎಸ್ 10 ಮತ್ತು ಮೌಂಟ್ ಲಿಟೆರಾ ಝೀ ಸ್ಕೂಲ್‌ನಲ್ಲಿ 8 ಮಕ್ಕಳು ದಾಖಲಾಗಿದ್ದಾರೆ.
ಶಾಲೆಗೆ ಮಕ್ಕಳ ದಾಖಲಾಗಿಗೆ ಜು. 31ರ ಗಡುವು ನೀಡಲಾಗಿತ್ತು. ಅವಧಿಮುಗಿದ ನಂತರ ಮಕ್ಕಳು ದಾಖಲಾಗದಿದ್ದರೆ ಅಂಥ ಶಾಲೆಗಳನ್ನು ಬಂದ್ ಮಾಡಲು ಬಿಇಒಗಳಿಗೆ ಸೂಚಿಸಲಾಗಿದೆ. ಅಲ್ಲಿದ್ದ ಶಿಕ್ಷಕರನ್ನು ಹುದ್ದೆ ಖಾಲಿ ಇರುವ ಶಾಲೆಗಳಿಗೆ ನಿಯೋಜನೆ ಮಾಡಲಾಗುವುದು.
- ಎಸ್.ಎಸ್. ಕೆಳದಿಮಠ, ಡಿಡಿಪಿಐ