ಶಿಗ್ಗಾಂವಿಯಲ್ಲಿ 15 ವರ್ಷದಿಂದ ಅಭಿವೃದ್ಧಿ ಶೂನ್ಯ: ಡಿ.ಕೆ. ಶಿವಕುಮಾರ

Congress State President D K Shivakumar election Campain in Shiggavi
Published on

ಬಂಕಾಪುರ: ಕಳೆದ ಹದಿನೈದು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಆದರೆ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆರೋಪಿಸಿದರು.

ಶಿಗ್ಗಾಂವಿ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್​ಖಾನ್ ಪಠಾಣ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರ ಮುಖಂಡತ್ವದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತು. ಅವರ ಅಧಿಕಾರದ ಅವಧಿಯಲ್ಲಿ ಬಡವರ ಪರವಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಲಿಲ್ಲ. ಕಾಂಗ್ರೆಸ್ ಸರ್ಕಾರ ಹಲವು ಯೋಜನೆಗಳ ಮೂಲಕ ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಇನ್ನುಮುಂದೆ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ನೀಡುತ್ತಿರುವ ವಿವಿಧ ಭಾಗ್ಯಗಳ ಮೂಲಕ ರಾಜ್ಯದ ಜನರ ಕಲ್ಯಾಣ ಮಾಡುತ್ತಿದೆ. ಬೊಮ್ಮಾಯಿ ಅವರ ಎರಡೂವರೆ ವರ್ಷದ ಆಡಳಿತ ಅವಧಿಯಲ್ಲಿ ಇಂತಹ ಒಂದೇ ಒಂದು ಸಾಧನೆ ತೋರಿಸಿದರೆ ನಾನು ಉಪಚುನಾವಣೆ ಪ್ರಚಾರದಿಂದ ವಾಪಸ್ ಹೋಗುತ್ತೇನೆ ಎಂದು ಸವಾಲೆಸೆದರು.

ಬಸವರಾಜ ಬೊಮ್ಮಾಯಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸುವ ಭರವಸೆ ಕೊಟ್ಟು ನಂತರ ಮಗನಿಗೆ ಟಿಕೆಟ್ ಕೊಡಿಸಿದ್ದಾರೆ. ಆದರೆ, ಚನ್ನಪಟ್ಟಣದಲ್ಲಿ ನನ್ನ ತಮ್ಮನಿಗೆ ಅವಕಾಶ ಇದ್ದರೂ ಪಕ್ಷದ ಸಿದ್ಧಾಂತ ನಂಬಿ ಬಂದ ಸಿ.ಪಿ. ಯೋಗೇಶ್ವರ ಅವರನ್ನು ಅಭ್ಯರ್ಥಿಯಾಗಿ ಘೊಷಣೆ ಮಾಡಿದ್ದೇವೆ. ಶಿಗ್ಗಾಂವಿ ಕ್ಷೇತ್ರದ ಪಕ್ಷದ ಎಲ್ಲ ಆಕಾಂಕ್ಷಿ ಅಭ್ಯರ್ಥಿಗಳು ಒಗ್ಗಟ್ಟಾಗಿದ್ದು, ಯಾಸೀರ್​ಖಾನ್ ಪಠಾಣ ಅವರನ್ನು ಗೆಲ್ಲಿಸುತ್ತಾರೆ. ಕಾಂಗ್ರೆಸ್ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸ. ರಾಹುಲ್ ಗಾಂಧಿ ಈ ದೇಶದ ದೊಡ್ಡ ಶಕ್ತಿಯಾಗಿ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಜಾತಿಗಳನ್ನು ಒಡೆದು ಕೋಮು ದ್ವೇಷ ಹರಡುತ್ತಿದೆ ಎಂದು ಡಿಕೆಶಿ ಟೀಕಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅಪರೇಷನ್ ಕಮಲದ ಮೂಲಕ ಅಧಿಕಾರಿಕ್ಕೆ ಬಂದ ಬಿಜೆಪಿಯನ್ನು ನಾಡಿನ ಜನ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. 17 ವರ್ಷ ಅಧಿಕಾರ ಅನುಭವಿಸಿದ ಬೊಮ್ಮಾಯಿ ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕಟ್ಟಿಲ್ಲ. ಕೆರೆ ತುಂಬಿಸಿಲ್ಲ. ಒಂದೇ ಒಂದು ಗ್ರಾಮೀಣ ರಸ್ತೆ ಮಾಡಿಲ್ಲ. ಸುಳ್ಳು ಹೇಳುವ ಮೂಲಕ ಜನರನ್ನು ಯಾಮಾರಿಸಿದ್ದಾರೆ. ಒಂದು ವೇಳೆ ಭರತ ಬೊಮ್ಮಾಯಿಗೆ ಮತ ಹಾಕಿದರೆ ಅದು ಕಸದ ಬುಟ್ಟಿಗೆ ಹಾಕಿದಂತೆ. ಇನ್ನೂ ಮೂರು ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಶಿಗ್ಗಾಂವಿ ಅಭಿವೃದ್ಧಿಗೆ ಕಾಂಗ್ರೆಸ್​ಗೆ ಮತ ಹಾಕಿ ಎಂದರು.

ಐದು ಗ್ಯಾರಂಟಿಗಳಿಂದ ಕೈ ಬಲಿಷ್ಠ

ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋತಿರಬಹುದು ಆದರೆ, ಈ ಕ್ಷೇತ್ರದಲ್ಲಿ ಎಂಟು ಸಾವಿರ ಮತಗಳ ಮುನ್ನಡೆ ನೀಡಿದೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಯಾಸೀರ್​ಖಾನ್ ಪಠಾಣರನ್ನು ಅತಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ವಿಶ್ವಾಸವಿದೆ. ಐದು ಬೆರಳು ಸೇರಿ ಮುಷ್ಠಿಯಾಗಿದೆ. ಐದು ಗ್ಯಾರಂಟಿಗಳಿಂದ ಕೈ ಬಲಿಷ್ಠವಾಗಿದೆ. ಕಮಲ ಕೆರೆಯಲ್ಲಿ ಇದ್ದರೆ ಚಂದ, ತೆನೆ ಹೊಲದಲ್ಲಿ ಇದ್ದರೆ ಚಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಡಿ.ಕೆ. ಶಿವಕುಮಾರ ಹೇಳಿದರು.

ಮನಸು ಮತ್ತು ಮನೆಗಳನ್ನು ಉದ್ಧಾರ ಮಾಡುವ ದೃಷ್ಟಿಕೋನದಿಂದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಕಾಂಗ್ರೆಸ್ ಕಟ್ಟಿಸಿದ ಆಸ್ಪತ್ರೆಗಳಲ್ಲಿ ಹುಟ್ಟಿ ಕಾಂಗ್ರೆಸ್ ಕಟ್ಟಿಸಿದ ಶಾಲೆಗಳಲ್ಲಿ ಓದಿದ ಬಿಜೆಪಿಗರು 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಮುಂದಿನ ಆರು ದಿನ ಕುಂದೂರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಉಸ್ತುವಾರಿ ನನಗೆ ನೀಡಲಾಗಿದೆ. ಪಕ್ಷದ ಅಭ್ಯರ್ಥಿ ಯಾಸೀರ್​ಖಾನ್ ಪಠಾಣ ಗೆಲುವಿಗೆ ಶ್ರಮಿಸಲಾಗುವುದು.

| ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net