ಬೆಂಗಳೂರು ನಗರ ವಿವಿಯಲ್ಲಿ ಫೆ.16ರಿಂದ ಶೂನ್ಯ ಕಾರ್ಬನ್, ಡಿಜಿಟಲ್ ಪರಿವರ್ತನೆ ಸಮ್ಮೇಳನ

BCU
Published on

ಬೆಂಗಳೂರು ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಫೆ.16 ಮತ್ತು 17ರಂದು ‘ನಿವ್ವಳ ಶೂನ್ಯ ಇಂಗಾಲ ಮತ್ತು ಡಿಜಿಟಲ್ ರೂಪಾಂತರದ ಉಭಯ ಪರಿವರ್ತನೆ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳವನ್ನು ಹಮ್ಮಿಕೊಂಡಿದೆ.

ಅರಮನೆ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಫೆ.16ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಚಾಲನೆ ನೀಡಲಿದ್ದಾರೆ. ಫೆ.17ರಂದು ಭಾರತದ ವೋಲ್ವೋ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಬೆಂ.ನಗರ ವಿವಿ ಕುಲಪತಿ ಡಾ. ಲಿಂಗರಾಜ ಗಾಂಧಿ ತಿಳಿಸಿದರು.

ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾತಾವರಣದಲ್ಲಿ ಕಾರ್ಬನ್ ನಿರ್ವಹಣೆ ಮಾಡುವ ಕುರಿತುಎರಡೂ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಲು 2023ರ ಮಾರ್ಚ್‌ನಲ್ಲಿ ಒಡಂಬಡಿಕೆ ಮಾಡಿಕೊಂಡಿವೆ. ವರದಿ ಆಧಾರದಲ್ಲಿ ಪಠ್ಯಪುಸ್ತಕ ರಚನೆ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಿಮ ವರದಿಯನ್ನು ಸರ್ಕಾರಕ್ಕೂ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಸಂಶೋಧನೆಯ ಕರಡು ಆಧಾರದಲ್ಲಿ ಸಮ್ಮೇಳನದಲ್ಲಿ ಚರ್ಚೆಗಳನ್ನು ನಡೆಸಲಾಗುತ್ತದೆ.

ಹೀರೋ ಸೈಕಲ್ ಉದ್ಯಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ರಾಯ್, ಹೀರೋ ಸೈಕಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರೇಮ್‌ಕುಮಾರ್, ಎಫ್ ಕೆಸಿಸಿಎಲ್ ಅಧ್ಯಕ್ಷ ಡಾ. ರಮೇಶ್‌ಚಂದ್ರ ಲಕೋಟಿ, ದಕ್ಷಿಣ ಭಾರತ ಬ್ರಿಟಿಷ್ ಕೌನ್ಸಿಲ್‌ನ ನಿರ್ದೇಶಕ ಜನಕ ಪುಷ್ಪನಾಥಣ್ ಸೇರಿ ವಿಶ್ವವಿದ್ಯಾಲಯದ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ 650ಕ್ಕೂ ಹೆಚ್ಚಿನ ವಿದ್ಯಾಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ ಜವರೇಗೌಡ, ವಿತ್ತಾಧಿಕಾರಿ ವಿಜಯಲಕ್ಷ್ಮೀ ಎಂ.ವಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net