

ಮುಂಡಗೋಡ: ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಯಿದೆ. ಮನುಷ್ಯರಲ್ಲಿ ತಾಯಿಗೆ ತನ್ನ ಮಗುವಿನ ಮೇಲೆ ಹೇಗೆ ಮಮತೆ ಇರುತ್ತದೆಯೋ ಹಾಗೆಯೇ ಪ್ರಾಣಿಗಳಲ್ಲಿಯೂ ತಮ್ಮ ಕಂದಮ್ಮಗಳ ಮೇಲೆ ಮಮಕಾರ ಇರುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಹೊಸ ಓಣಿ ಬಡಾವಣೆಯಲ್ಲಿ ಕೃಷಿಕರ ಕುಟುಂಬವಾದ ನಿಂಗಮ್ಮ ಕುರುಬರ ಅವರ ಮನೆಯಲ್ಲಿ ಅಪರೂಪದ ಗೋವು ಇದೆ. ಅದರ ಹೆಸರು ಪುಟ್ಟಗೌರಿ. ಇದಕ್ಕೆ ತನ್ನ ಕರುವೆಂದರೆ ಎಲ್ಲಿಲ್ಲದ ಮಮಕಾರ. ಈಗ ಪುಟ್ಟಗೌರಿ ಐದನೇ ಬಾರಿ ಕರುವಿಗೆ ಜನ್ಮ ನೀಡಿದೆ. ಈ ಕರುವಿನ ಮೇಲೆ ಅತ್ಯಂತ ಪ್ರೀತಿ ಮತ್ತು ಅಷ್ಟೇ ಕಾಳಜಿ ತೋರುತ್ತದೆ. ಯಾರೇ ಬೈಕ್ ಸವಾರರು ಬಡಾವಣೆಗೆ ಪ್ರವೇಶ ಮಾಡಿದರೆ ಅವರ ಹಿಂದೆ ಓಡಿ ತನ್ನ ಯಜಮಾನಿಯ ಮನೆಯವರೆಗೆ ಬಂದು ಕರುವಿನ ಕಾವಲು ಕಾಯುತ್ತಾಳೆ.
ಈ ಹಿಂದೆ ಪುಟ್ಟ ಗೌರಿ ತಮ್ಮ ಯಜಮಾನಿಯ ಮನೆಯ ಅನತಿ ದೂರದಲ್ಲಿ ಮೊದಲ ಬಾರಿ ಕರುವಿಗೆ ಜನ್ಮ ನೀಡಿದಾಗ ಅಲ್ಲಿ ಓಡಾಡುವ ಬೈಕ್ಗಳನ್ನು ಹಾಗೂ ಸೇರಿದ ಜನರನ್ನು ನೋಡಿ ಹೆದರಿ ಕರುವನ್ನು ಬಿಟ್ಟು ಓಡಿ ಹೋಗಿದ್ದಳು. ನಂತರ ವಾಪಸ್ ಬರುವಷ್ಟರಲ್ಲಿ ಕರು ಸತ್ತು ಹೋಗಿತ್ತು. ಈ ಒಂದು ಘಟನೆಯಿಂದ ಮತ್ತೆ ತನ್ನ ಕರುವನ್ನು ಯಾರಾದರೂ ತೆಗೆದುಕೊಂಡು ಹೋಗುವರೋ ಅಥವಾ ಏನಾಗುವುದೋ ಎಂಬ ಭಯದಿಂದ ನಂತರದ ಕರುಗಳಿಗೆ ಜನ್ಮ ನೀಡಿದಾಗಿನಿಂದ ಕರು ದೊಡ್ಡದಾಗುವವರೆಗೂ ಪುಟ್ಟ ಗೌರಿ ಮನೆ ಬಿಟ್ಟು ಕದಲುವುದಿಲ್ಲ. ತನ್ನ ಕರುವಿನ ಕಾವಲಾಗಿಯೇ ಇರುತ್ತದೆ.
ಪುಟ್ಟ ಗೌರಿ ನಮ್ಮ ಮನೆಯಲ್ಲಿಯೇ ಜನಿಸಿದ ಗೋವು. ಉಳಿದ ಗೋವುಗಳಿಗಿಂತ ವಿಭಿನ್ನವಾದ ಮತ್ತು ತುಂಬಾ ಸಭ್ಯವಾದದ್ದು. ಯಾರಿಗೂ ಹಾಯುವುದಾಗಲೀ ಒದೆಯುವುದಾಗಲೀ ಮಾಡುವುದಿಲ್ಲ. ಬಡಾವಣೆಯಲ್ಲಿ ಇದು ಎಲ್ಲರಿಗೂ ಅಚ್ಚು-ಮೆಚ್ಚಿನ ಗೋವು. ನಿಂಗಮ್ಮ ಕುರುಬರ ಗೋವಿನ ಮಾಲಕಿ