ಮೈಸೂರು: ಅಂತಾರಾಷ್ಟ್ರೀಯ ಯುವ ದಿನ ಆಚರಣೆ ಅಂಗವಾಗಿ ಆ.27ರಂದು ಯುವೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಬಸವರಾಜು ಆರ್.ಶ್ರೇಷ್ಠ ತಿಳಿಸಿದರು.
ಗ್ರಾಮ್ ಸಂಸ್ಥೆಯು ಮೈಸೂರು ವಿಶ್ವ ವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ ಹಾಗೂ ಜಿಎಸ್‌ಎಸ್ ಸಂಸ್ಥೆಗಳ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 11ಕ್ಕೆ ಮೈಸೂರು ವಿವಿಕುಲಪತಿ ಡಾ.ಲೋಕನಾಥ್ ಅವರ ಅಧ್ಯಕ್ಷತೆಯಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಚ್‌ಎಸ್‌ಎಸ್ ಸಂಸ್ಥೆಯ ಜುದಿತ್ ವೈನ್ಬರ್ಗರ್ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ದರ್ಶನ್ ಧ್ರುವನಾರಾಯಣ್, ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್, ಜಿಎಸ್‌ಎಸ್ ಸಂಸ್ಥೆಯ ಶ್ರೀಹರಿ, ಡಾ. ಚಂದ್ರಮೌಳಿ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಾಮಾಜಿಕ ನ್ಯಾಯ, ಶಿಕ್ಷಣ ಆರ್ಥಿಕ ಸಬಲೀಕರಣ, ಹವಾಮಾನ ಬದಲಾವಣೆ ಕುರಿತಂತೆ ಬೀದಿ ನಾಟಕ ಸ್ಪರ್ಧೆ, ಸುಸ್ಥಿರ ಮೈಸೂರಿಗಾಗಿ ಯುವ ಸಹಭಾಗಿತ್ವ ಕುರಿತ ಚರ್ಚೆ ನಡೆಯಲಿದೆ. ಪೋಸ್ಟರ್ ಪ್ರಸ್ತುತಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ರೀಲ್ ಸ್ಪರ್ಧೆ, ಯುವೋತ್ಸವ ಸೇರಿದಂತೆ ಇನ್ನಿತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಆಯೋಜಕರಾದ ಡಿ.ಶ್ರೀಹರಿ, ಭಗವಾನ್ ಬಿದರಕೋಟೆ, ಸಿಂಚನಾ ಎಂ.ಗೌಡ, ವಿಷ್ಣು ಇದ್ದರು.