

ಮಂಗಳೂರು: ಬಿಲ್ಲವ ಸಂಘ ಮತ್ತು ಯುವವಾಹಿನಿ ಒಂದೇ ಕುಟುಂಬದಂತೆ. ಹಿಂದೆ ತುಳುವರಿಗೆ ಗದ್ದೆ ಉತ್ತು ಬಿತ್ತುವ ಬೇಸಾಯದ ಕೆಲಸ ಮಾತ್ರ ಗೊತ್ತಿತ್ತು. ಆದರೆ ಈಗ ವೈವಿಧ್ಯಮಯ ಕೆಲಸ ಕಾರ್ಯಗಳಲ್ಲಿ ತುಳುವರು ತೊಡಗಿಸಿಕೊಂಡಿದ್ದಾರೆ ಎಂದು ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಹೇಳಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಆಟಿಡೊಂಜಿ ಕೂಟವನ್ನು ಭಾನುವಾರ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಲೋಕೇಶ್ ಕೋಟ್ಯಾನ್ ಮಾತನಾಡಿ, ಸಮಾಜಮುಖಿ ಸೇವೆ ಸಲ್ಲಿಸುತ್ತಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಯುವವಾಹಿನಿಯ ಕಾರ್ಯ ಶ್ಲಾಘನೀಯ ಎಂದರು.
ಲೀಲಾಕ್ಷ ಬಿ.ಕರ್ಕೇರ ಹಾಗೂ ದಿನೇಶ್ ಸುವರ್ಣ ರಾಯಿ ಚೆನ್ನೆಮಣೆ ಆಡಿ ಚೆನ್ನೆಮಣೆ ಸ್ಪರ್ಧೆಗೆ ಚಾಲನೆ ನೀಡಿದರು. ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಕಾರ್ಯದರ್ಶಿ ಚೇತನ್ ಮುಂಡಾಜೆ, ಸಂಚಾಲಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡರು. ನವೀನ್ ಪೂಜಾರಿ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.
ವಿಶಿಷ್ಟವಾದ ತುಳುನಾಡಿನ ಗುತ್ತುಮನೆ ಮಾದರಿಯ ಸಭಾಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ತಂಬಿಗೆಯಲ್ಲಿ ನೀರು, ಓಲೆಬೆಲ್ಲ, ವೀಳ್ಯೆದೆಲೆ, ಅಡಕೆ ನೀಡಿ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ನಾಗಬೆರ್ಮೆರೆನ ಪಾಡ್ದನದೊಂದಿಗೆ ಸ್ವಸ್ತಿಕ ಇಟ್ಟು, ದೀವಟಿಗೆ ಉರಿಸಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.