ಯುವಶಕ್ತಿ ದೇಶದ ಪ್ರಗತಿಯ ಸಂಕೇತ, ಸಚಿವ ಡಾ.ಕೆ.ಸುಧಾಕರ್ ಅಭಿಮತ

29019b10-b568-47d4-a33f-3732df3ea14c
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇಶದ ಯುವಶಕ್ತಿ ದೇಶಕ್ಕಾಗಿ ಸಮರ್ಪಣಾ ಭಾವದಿಂದ ದುಡಿದರೆ ದೇಶದ ಪ್ರಗತಿ ಉತ್ತುಂಗಕ್ಕೇರುತ್ತದೆ ಆದ್ದರಿಂದ ಯುವಶಕ್ತಿಯೇ ದೇಶದ ಪ್ರಗತಿಯ ಸಂಕೇತ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.


ದೇವನಹಳ್ಳಿಯಲ್ಲಿ ಶನಿವಾರ ಹರ್‌ಘರ್ ತಿರಂಗಾ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ತ್ರಿವರ್ಣ ಧ್ವಜದಲ್ಲಿನ ಕೇಸರಿ ಬಣ್ಣ ಧೈರ್ಯದ ಸಂಕೇತವಾಗಿದ್ದು, ದೇಶದ ಯುವಶಕ್ತಿಯನ್ನು ತೋರಿಸುತ್ತದೆ. ಬಿಳಿ ಬಣ್ಣ ಅಹಿಂಸೆ, ಶಾಂತಿ ಮತ್ತು ಸತ್ಯದ ಸಂಕೇತವಾಗಿದೆ ಹಾಗೂ ಹಸಿರು ಬಣ್ಣ ಫಲವತ್ತತೆ ಹಾಗೂ ಎಲ್ಲ ನದಿಗಳ ಶಕ್ತಿಯ ಸಂಕೇತವಾಗಿದೆ ಅಶೋಕ ಚಕ್ರ ನ್ಯಾಯ ಶಾಸನದ ಚಿಹ್ನೆಯಾಗಿದೆ ಎಂದರು.

ಪ್ರತಿಯೊಬ್ಬರು ದೇಶಾಭಿಮಾನದಿಂದ ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟು ಪ್ರತಿಯೊಬ್ಬರ ಮನೆ, ಕಚೇರಿ ಅಂಗಡಿ ಮುಗ್ಗಟ್ಟುಗಳ ಮೇಲೆ ಧ್ವಜಾರೋಹಣ ಮಾಡಿ ಎಂದು ಕರೆ ನೀಡಿದರು.


ಪಟ್ಟಣದಲ್ಲಿ ವಾಕಥಾನ್: ಮನೆ ಮನೆ ತಿರಂಗಾ ಅಭಿಯಾನದ ಪ್ರಯುಕ್ತ ದೇವನಹಳ್ಳಿ ತಾಲೂಕು ಕಚೇರಿಯಿಂದ ವಿಜಯಪುರ ರಸ್ತೆಯ ಮೂಲಕ ದೇವನಹಳ್ಳಿಯ ಕ್ರೀಡಾಂಗಣದವರೆಗೆ ತ್ರಿವರ್ಣ ಧ್ವಜ ಹಿಡಿದು ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು 1 ಕಿ.ಮೀ ಉದ್ದದ ತ್ರಿವರ್ಣ ಧ್ವಜ ಹಿಡಿದು ಸಾಗಿದ್ದು ಗಮನ ಸೆಳೆಯಿತು. ತ್ರಿವರ್ಣ ಧ್ವಜ ಹಿಡಿದು ಭೋಲೋ ಭಾರತ್ ಮಾತಾಕಿ, ವಂದೇ ಮಾತರಂ ಘೋಷಣೆಗಳೊಂದಿಗೆ ಜೈಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. ದೇವನಹಳ್ಳಿಯ ಪ್ರಮುಖ ರಸ್ತೆಗಳು ತ್ರಿವರ್ಣಮಯವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net