

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಯುವ ಪ್ರತಿಭಾವಂತರ ಪ್ರತಿಭೆ ಗುರುತಿಸಿ, ಪ್ರೋತ್ಸಾಹ ನೀಡುವುದು ಯುವಸೌರಭ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ತಿಳಿಸಿದರು.
ದೊಡ್ಡಬಳ್ಳಾಪುರ ಜವಾಹರ್ ನವೋದಯ ವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಯುವಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡು, ನುಡಿ, ಸಾಂಸ್ಕೃತಿಕ ಪರಂಪರೆಯ ಅರಿವು ಯುವಜನತೆಯಲ್ಲಿ ಇರಬೇಕು. ಕಲೆ ಮತ್ತು ಸಾಹಿತ್ಯದ ಆಸಕ್ತಿಯು ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣದಲ್ಲಿ ಸಹಕಾರಿ ಆಗುತ್ತದೆ ಎಂದರು.
ಜವಾಹರ್ ನವೋದಯ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಮತ್ತು ಕಲಿಕೆಗೆ ಸಾಂಸ್ಕೃತಿಕ ವೇದಿಕೆಗಳ ಅಗತ್ಯ ಇರುತ್ತದೆ. ನಮ್ಮ ಕನ್ನಡ ನಾಡು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಇಂತಹ ಪರಂಪರೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯನ್ನು ಯುವಜನತೆ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಯುವಜನತೆ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಯುವ ಸೌರಭ ದೊಡ್ಡಬಳ್ಳಾಪುರ ಹಂಸವೇಣಿ ತಂಡದವರಿಂದ ಸಮೂಹ ನೃತ್ಯ, ದೇವನಹಳ್ಳಿ ಅರುಣ್ ಕುಮಾರ್ ತಂಡದವರಿಂದ ಸುಗಮ ಸಂಗೀತ, ಅರದೇಶನಹಳ್ಳಿ ಅಂಜಲಿ ತಂಡದವರಿಂದ ವಚನಗಾಯನ, ಟಿ.ಅಗ್ರಹಾರ ದೀಪಿಕಾ ತಂಡದವರಿಂದ ಸಾಮಾಜಿಕ ನಾಟಕ ಪ್ರದರ್ಶನ, ಹೊಸಕೋಟೆ ನವೀನ್ ತಂಡದವರಿಂದ ತಮಟೆ ಮತ್ತು ದೇವನಹಳ್ಳಿ ಮಧು ತಂಡದವರಿಂದ ನಗಾರಿ ವಾದ್ಯಗಳ ಕಾರ್ಯಕ್ರಮಗಳು ನಡೆದವು.