

ಶಿವಮೊಗ್ಗ: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆಯು ಯುವ ಜನತೆಗೆ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದ್ದು ಐದೂ ಗ್ಯಾರಂಟಿಗಳಿಗೂ ಲೋಕಸಭಾ ಚುನಾವಣೆಗೆ ಮಾತ್ರ ಭವಿಷ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆರೋಪಿಸಿದರು.
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ 5ನೇ ಗ್ಯಾರಂಟಿ ಎಲ್ಲ ನಿರುದ್ಯೋಗಿ ಪದವೀಧರರಿಗೂ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ 2022-23ನೇ ಸಾಲಿನ ಏಪ್ರಿಲ್ ನಂತರ ಉತ್ತೀರ್ಣರಾದವರಿಗೆ ಮಾತ್ರ ಎಂದು ಹೇಳುವ ಮೂಲಕ ಲಕ್ಷಾಂತರ ಯುವಜನತೆಗೆ ದ್ರೋಹ ಮಾಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಐದು ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಎಲ್ಲ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ವಿಶೇಷವಾಗಿ ಪದವೀಧರ ನಿರುದ್ಯೋಗಿಗಳಿಗೆ ತಲಾ 3 ಸಾವಿರ ರೂ. ಮತ್ತು ಡಿಪ್ಲೊಮಾ ಆದವರಿಗೆ ತಲಾ 1,500 ರೂ. ನೀಡುತ್ತಿದೆ. ಎಲ್ಲರಿಗೂ ಭತ್ಯೆ ಸಿಗುವುದಿಲ್ಲ. ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಆದವರು ಯೋಜನೆಯಿಂದ ಹೊರಗುಳಿಯಲಿದ್ದಾರೆ ಎಂದರು.
ಸರ್ಕಾರದ ಹಲವು ಷರತ್ತುಗಳನ್ನು ವಿಧಿಸುತ್ತಿದೆ. ಇದರಿಂದ ಮತ್ತಷ್ಟು ಸಂಖ್ಯೆ ಕಡಿಮೆ ಆಗಲಿದೆ. ರಾಜ್ಯದಲ್ಲಿ ಐದಾರು ವಿಶ್ವವಿದ್ಯಾಲಯಗಳು ಏಪ್ರಿಲ್ ನಂತರ ಫಲಿತಾಂಶ ನೀಡಿವೆ. ಹಾಗಾಗಿ ಇನ್ನೂ ಮೂರ್ನಾಲ್ಕು ತಿಂಗಳು ಸಾವಿರಾರು ಪದವೀಧರರು ಸರ್ಕಾರದ ಭತ್ಯೆಯಿಂದ ವಂಚಿತರಾಗಲಿದ್ದಾರೆ. ಪ್ರಸ್ತುತ 60 ಸಾವಿರಕ್ಕೂ ಕಡಿಮೆ ನೋಂದಣಿ ಆಗಿದ್ದು ಯುವಸಮೂಹಕ್ಕೆ ಸಾಕಷ್ಟು ಅನ್ಯಾಯವಾಗಲಿದೆ ಎಂದು ದೂರಿದರು.
ಶಾಸಕ ಎಸ್.ಎಸ್.ಚನ್ನಬಸಪ್ಪ, ಎಂಎಲ್‌ಸಿ ಎಸ್.ರುದ್ರೇಗೌಡ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಬಿ.ಆರ್.ಮಧುಸೂದನ್, ಸಂತೋಷ್ ಬಳ್ಳೆಕೆರೆ, ಎಚ್.ಮಾಲ್ತೇಶ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.