

ಮಡಿಕೇರಿ: ೨೦೨೫ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಈ ಸಂಬಂಧ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಬುಧವಾರ ಬಿಡುಗಡೆ ಮಾಡಿದರು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಭಿತ್ತಿಪತ್ರ ಬಿಡುಗಡೆ ಮಾತನಾಡಿದ ಜಿಲ್ಲಾಧಿಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ೨೦೨೪ ರ ಜ೧ ರಂದು ಯುವನಿಧಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಆ ಹಿನ್ನೆಲೆಯಲ್ಲಿ ೨೦೨೫ ರ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಯೋಜನೆಯ ಸದುಪಯೋಗಕಕ್ಕೆ ಮನವಿ ಮಾಡಿದರು.
ಪದವಿ ಹಾಗೂ ಸ್ನಾತಕೋತ್ತರ ಪದವಿ ನಿರುದ್ಯೋಗಿಗಳಿಗೆ ಮೂರು ಸಾವಿರ ರೂ ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ೧೫೦೦ ರೂ.ವನ್ನು ಪ್ರತೀ ತಿಂಗಳು ನಿರುದ್ಯೋಗಿ ಭತ್ಯೆಯನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಅರ್ಹರು ಹೆಸರು ನೋಂದಣಿ ಮಾಡುವಂತೆ ಕೋರಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ, ೨೦೨೩, ೨೦೨೪ ಹಾಗೂ ೨೦೨೫ ರಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮೋ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಫಲಿತಾಂಶ ಪ್ರಕಟವಾದ ೧೮೦ ದಿನಗಳ ನಂತರವು ಸಾರ್ವಜನಿಕ/ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಇರದವರು, ಸ್ವಯಂ ಉದ್ಯೋಗದಲ್ಲಿ ಇರದವರು ಅರ್ಹರಾಗಿದ್ದಾರೆ. ಉನ್ನತ ವ್ಯಾಸಂಗ ಮುಂದುವರಿಸದೆ ಇರುವವರು ಹಾಗೂ ಕನಿಷ್ಠ ೬ ವರ್ಷ ಕರ್ನಾಟಕ ನಿವಾಸಿಯಾಗಿರುವವರು ಅರ್ಹರಾಗಿದ್ದಾರೆ ಎಂದು ತಿಳಿಸಿದರು.
ಯುವನಿಧಿ ಪ್ಲಸ್ ಕೌಶಲ್ಯ ತರಬೇತಿ ಕಾರ್ಯಕ್ರಮದಡಿ ಯುವನಿಧಿ ಫಲಾನುಭವಿಗಳು ಉಚಿತ ಕೌಶಲ್ಯ ತರಬೇತಿ ಪಡೆಯಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವೆಬ್‌ಸೈಟ್ hಣಣಠಿs://ತಿತಿತಿ.ಞಚಿushಚಿಟಞಚಿಡಿ.ಛಿom/ಚಿಠಿಠಿ/ಡಿegisಣಡಿಚಿಣioಟಿ ಕ್ಲಿಕ್ ಮಾಡಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಜಿಟಿಟಿಸಿ, ಕೆಜಿಟಿಟಿಐ, ಸಿಡಾಕ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಮುಖಾಂತರ ಸಿಎಂಕೆಕೆವೈ ಯೋಜನೆಯಡಿ ಕೌಶಲ್ಯ ಉಚಿತ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ನೋಂದಣಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಪ್ರಮಾಣ ಪತ್ರ ನೋಂದಣಿಗೆ ಅಗತ್ಯ ದಾಖಲಾತಿ ಒದಗಿಸಬೇಕು. ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ನೋಂದಣಿಯಲ್ಲಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಹಾಗೂ ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆಯ ವಿವರ ನೀಡಬೇಕು ಎಂದು ತಿಳಿಸಿದರು.
೨೦೨೪ ರ ಜನವರಿಯಿಂದ ಜುಲೈ ೨೦೨೫ ರವರೆಗೆ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೧೭೧೧ ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೪೬೬, ಪೊನ್ನಂಪೇಟೆ ತಾಲೂಕಿನಲ್ಲಿ ೧೯೩, ಕುಶಾಲನಗರ ತಾಲೂಕಿನಲ್ಲಿ ೨೬೯, ಸೋಮವಾರಪೇಟೆ ತಾಲೂಕಿನಲ್ಲಿ ೪೮೩, ವಿರಾಜಪೇಟೆ ತಾಲೂಕಿನಲ್ಲಿ ೩೦೦ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದು, ಯುವನಿಧಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮದನ್ ಇತರರು ಇದ್ದರು.