ಮೈಸೂರಿನಲ್ಲಿ 'ಯುವನಿಧಿ'ಗೆ ಚಾಲನೆ

Yuvanidhi' drive in Mysore
Published on

ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ದಲ್ಲಿ ಯುವನಿಧಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಯುವನಿಧಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಯುವನಿಧಿ ಯೋಜನೆಯು 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಹೊಂದಿ 6 ತಿಂಗಳಿಂದ ಉದ್ಯೋಗ ದೊರೆಯದೆ ಇರುವವರಿಗೆ ಅನ್ವಯವಾಗಲಿದೆ. ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ., ಡಿಪ್ಲೊಮಾ ಉತ್ತೀರ್ಣರಾ ದವರಿಗೆ ಮಾಸಿಕ 1500 ರೂ. ನೀಡಲಾಗುವುದು. ಯುವನಿಧಿಯನ್ನು ಯುವಜನರು ಸರಿಯಾದ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯುವನಿಧಿಯಿಂದ ಯುವಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಈ ಹಣವನ್ನು ನೀಡುತ್ತಿರುವುದು ಯುವಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಸಲುವಾಗಿ. ಯುವಜನರು ಆತ್ಮಸ್ಥೈರ್ಯ ಮೈಗೂಡಿಸಿಕೊಂಡು ಏನನ್ನಾದರು ಸಾಧಿಸಬೇಕು. ಯುವನಿಧಿಯನ್ನು ಉನ್ನತ ಶಿಕ್ಷಣ ಅಥವಾ ಉತ್ತಮ ಕಾರ್ಯಕ್ಕೆ ಬಳಕೆ ಮಾಡಿ ಎಂದರು.

ಯುವಜನರು ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ನಾನು ಮುಂದೆ ಏನಾಗಬೇಕು ಎಂಬ ನಿರ್ಧಾರ ಮಾಡಬೇಕು. ವಿದ್ಯಾಭ್ಯಾಸ ಪೂರ್ಣಗೊಳ್ಳಲಿ ನಂತರ ನೋಡಿಕೊಳ್ಳುವ ಎಂಬ ಮನಸ್ಥಿತಿ ಇರಬಾರದು. ಒಳ್ಳೆಯ ಕಡೆ ಉದ್ಯೋಗ ಪಡೆಯುವ ಆಲೋಚನೆ ಜತೆಗೆ ಸ್ವ ಉದ್ಯೋಗ ಪ್ರಾರಂಭಿಸುವ ಕಡೆಗೂ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಯುವಜನರು ಜವಾಬ್ದಾರಿಯುತ ನಾಗರಿಕರಾಗಬೇಕು. ಮಾದಕ ವಸ್ತುಗಳು ಪ್ರತಿಯೊಬ್ಬರ ಬದುಕು ಹಾಳು ಮಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ಯುವಜನರು ಮಾದಕ ವಸ್ತುಗಳಿಂದ ದೂರ ಇರಬೇಕು. ಕೇವಲ ಮಾದಕ ವಸ್ತು ಮಾತ್ರವಲ್ಲ ಡಿಜಿಟಲ್ ದುಶ್ಚಟಗಳಿಗೆ ಹಲವರು ದಾಸರಾಗುತ್ತಿದ್ದಾರೆ. ಜನರು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಆ ಮೂಲಕ ಅಮೂಲ್ಯ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವಜನರಿಗೆ ಮಾದರಿಯಾಗಿರುವ ವಿವೇಕಾನಂದರ ದಿನದಂದು ಎಲ್ಲ ಯುವಜನರು ಅವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರಂತೆ ಒಳ್ಳೆಯ ಮಾರ್ಗದಲ್ಲಿ ನಡೆದು ಇತರರಿಗೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ನಾರಾಯಣ ಮೂರ್ತಿ, ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕ ಎಚ್.ಎಂ ಮಂಜುನಾಥ್, ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ರಹಿಮಾನ್ ಹಾಗೂ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net