ಯುವನಿಧಿ ಯೋಜನೆ ಸದ್ಬಳಕೆ: ಡಾ. ಕೆ.ವಿದ್ಯಾಕುಮಾರಿ ಕರೆ

udp-YUVANIDHI
Published on

ಉಡುಪಿ: ಯುವ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಜಾರಿಗೊಳಿಸಿದ "ಯುವನಿಧಿ ಯೋಜನೆ'ಯ ಪೋಸ್ಟರ್​ಅನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಯುವ ಜನತೆಗೆ ಅರ್ಥಿಕ ಸಹಕಾರ ನೀಡುವುದರೊಂದಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾದಲ್ಲಿ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಲಭಿಸದೇ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದರು.

ಗರಿಷ್ಠ ಎರಡು ವರ್ಷ
ಈ ಯೋಜನೆಯಡಿ ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವ, ರಾಜ್ಯದಲ್ಲಿ ವಾಸವಾಗಿರುವವರು ಮಾತ್ರ ಸೇವಾಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 3,000 ರೂ., ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ. ನೇರವಾಗಿ ಅವರ ಖಾತೆಗೆ ಜಮಾ ಆಗಲಿದೆ. ಅರ್ಜಿ ಸಲ್ಲಿಸಿದಾಗಿನಿಂದ ಉದ್ಯೋಗ ದೊರೆಯುವವರೆಗೆ ಅಥವಾ 2 ವರ್ಷ ಗರಿಷ್ಠ ಅವಧಿಗೆ ಮಾತ್ರ ಈ ಭತ್ಯೆ ನೀಡಲಾಗುವುದು. ಅರ್ಜಿ ಸಲ್ಲಿಸುವಾಗ ಮತದಾರರ ಗುರುತಿನ ಚೀಟಿ, ಪದವಿ ಅಥವಾ ಡಿಪ್ಲೊಮಾದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ, ಆಧಾರ್​ ಕಾರ್ಡ್​, ಬ್ಯಾಂಕ್​ ಖಾತೆ ಸಹಿತ ಅಗತ್ಯ ದಾಖಲೆ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಎಚ್​., ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್​., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಅರುಣ್​, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಿಬ್ಬಂದಿ ಪೃಥ್ವಿರಾಜ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net