

ಮೈಸೂರು: ಯುವನಿಧಿ ಯೋಜನೆಯು ನಿರುದ್ಯೋಗಿ ಯುವಕ, ಯುವತಿಯರಿಗೆ ದಾರಿದೀಪವಾಗಿದ್ದು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಯುವನಿಧಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಯೋಜನೆ, ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ದೊಡ್ಡ ಬಲಿಷ್ಠವಾದ ಯೋಜನೆಯಾಗಿವೆ. ಹೆಣ್ಣು ಮಕ್ಕಳ ಜೀವನದಲ್ಲಿ ಕ್ರಾಂತಿಕಾರಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಎಂದರು.
ನಿರುದ್ಯೋಗ ಸಮಸ್ಯೆ ಎಂಬುದು ಒಂದು ದೊಡ್ಡ ಪಿಡುಗಾಗಿದೆ. ಓದಿಗೆ ಸರಿಯಾದ ಹುದ್ದೆ ಸಿಗದೇ ನಿರುದ್ಯೋಗಿಗಳು ಆಗುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವವರಿಗೆ ಯುವನಿಧಿ ಆಸರೆಯಾಗಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಯುವಜನರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡಲು ಮುಂದಾಗಿದ್ದು, 40 ರೀತಿಯ ತರಬೇತಿ ನೀಡಲಾಗುವುದು. ಇದರ ಉಪಯೋಗವನ್ನು ಸಹ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಹೇಳೀದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕಿ ಡಿ.ಎಂ.ರಾಣಿ ಮಾತನಾಡಿ, ಪಂಚ ಗ್ಯಾರಂಟಿಗಳಲ್ಲಿ ಒಂದಾದ ಈ ಯುವನಿಧಿ ಯೋಜನೆಯಿಂದ ಯಾರು ಸಹ ವಂಚಿತರಾಗಬಾರದು. ನೀವು ಈ ಯೋಜನೆಯ ಬಗ್ಗೆ ತಿಳಿದುಕೊಂಡು ನಿಮ್ಮ ಮೂಲಕ ಬೇರೆಯವರಿಗೂ ಹೆಚ್ಚಿನ ಮಾಹಿತಿ ಪ್ರಚರವಾಗಬೇಕು ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅರ್ಹರು ಸೇವಾ ಸಿಂಧು ಪೋರ್ಟಲ್ ನ ಮೂಲಕ ನೋಂದಣಿ ಮಾಡಿಕೊಳ್ಳುವಂತಹ ಕೆಲಸ ಪ್ರತಿ ನಿತ್ಯವೂ ಆಗುತ್ತಿದ್ದು, ಇದರ ಉಪಯೋಗವನ್ನು ಅರ್ಹರು ಬಳಸಿಕೊಳ್ಳಬೇಕು. ಅರ್ಹರು ಅರ್ಜಿ ಸಲ್ಲಿಸಿದ ನಂತರ ಪ್ರತಿ 3 ತಿಂಗಳಿಗೊಮ್ಮೆ 1ನೇ ತಾರಿಕಿನಿಂದ 25ನೇ ತಾರಿಗಿನೊಳಗೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಯುವನಿಧಿ ಹಣ ಬರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಉಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಪ್ರೊ.ಶಿವಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಏನಾದರೂ ಸಹ ಸಾಧಿಸಬಹುದು. ನೀವು ತೆಗೆದುಕೊಳ್ಳುವಂತಹ ದೃಢ ನಿರ್ಧಾರ ನಿಮ್ಮನ್ನು ಸದೃಢರನ್ನಾಗಿ ಮಾಡುತ್ತದೆ ಎಂದು ಹೇಳಿದರು.
ನೀವು ದೇಶವನ್ನು ಸರಿಯಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತಹ ಶಕ್ತಿಯನ್ನು ನೀವು ಹೊಂದಿದ್ದೀರ. ಅದರಿಂದ ನೀವು ಮಾಡುವಂತಹ ಕೆಲಸಗಳಲ್ಲಿ ದೃಢತೆ, ನಿಷ್ಠೆಯಿಂದ ಇರಬೇಕು. ಈ ಯುವನಿಧಿ ಯೋಜನೆಯು ಅತ್ಯಂತ ಉತ್ತಮವಾದ ಯೋಜನೆಯಾಗಿದೆ. ಈ ಯೋಜನೆಯ ಉಪಯೋಗವನ್ನು ನೀವು ತಿಳಿದುಕೊಂಡ ಇತರರಿಗೂ ತಿಸಬೇಕು ಎಂದು ತಿಳಿಸಿದರು.
ಯುವನಿಧಿ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ನೀವು ನಿಮ್ಮ ತಂದೆ ತಾಯಿಯರಿಗೆ ನಿಮ್ಮ ಗುರುಗಳಿಗೆ ಗೌರವವನ್ನು ತರುವಂತೆ ಬೆಳೆದು ಇತರರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಹುಣಸೂರು ಬಸವಣ್ಣ ಮಾತನಾಡಿ, ನಿರುದ್ಯೋಗಿಗಳಿಗೆ ಆರ್ಥಿಕ ಸಮಸ್ಯೆ ಎದುರಾಗಬಾರದು ಎಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಸಹ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷ ಸಾ.ಮಾ.ಯೋಗೇಶ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಐಕ್ಯೂಎಸಿ ಯ ಸಂಯೋಜಕ ಡಾ.ಪ್ರಕಾಶ್, ಪ್ಲೇಸ್ಮೆಂಟ್ ಸಂಚಾಲಕ ಡಾ.ಕೃಷ್ಣರಾಜೇಂದ್ರ ಹಾಗೂ ಇತರರು ಇದ್ದರು.