

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಲ್ಲಿ ಕಡೇ ಗ್ಯಾರಂಟಿಯಾದ ಯುವನಿಧಿಗೆಗೆ ಜಿಲ್ಲೆಯಲ್ಲಿ ಇಲ್ಲಿವರೆಗೆ 1450 ನಿರುದ್ಯೋಗಿಗಳು ನೋಂದಣಿಯಾಗಿದ್ದಾರೆ.
ಈಗಾಗಲೆ ನಾಲ್ಕು ಯೋಜನೆಗಳನ್ನು ಅನುಷ್ಠಾನ ಮಾಡಿರುವ ಸರ್ಕಾರ ಯುವನಿಧಿ ಯೋಜನೆಗೆ ನಿರುದ್ಯೋಗಿಗಳ ನೋಂದಣಿ ಕಾರ್ಯ ಆರಂಭಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ವ್ಯಾಪಕ ಪ್ರಚಾರದೊಂದಿಗೆ ಯುವನಿಧಿ ನೋಂದಣಿ ಕಾರ್ಯಕ್ರಮ ಆರಂಭಗೊಂಡಿದೆ.
ಜ.12ರಂದು ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಫಲಾನುಭವಿಗಳ ಖಾತೆಗೆ ಯೋಜನೆ ಹಣ ಪಾವತಿಗೆ ಆದೇಶ ಹೊರಡಿಸಿದ್ದಾರೆ. ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪಡೆದವರಿಗೆ ಮಾಸಿಕ 1,500 ಭತ್ಯೆ ನಿಗದಿಪಡಿಸಿದ್ದು, ಪದವಿ ಪಡೆದು 180 ದಿನ ಕಳೆದರೂ ಉದ್ಯೋಗ ಲಭಿಸದಿದ್ದರೆ ಈ ಮಾಸಿಕ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಉದ್ಯೋಗ ಲಭಿಸದಿದ್ದರೆ ಎರಡು ವರ್ಷದವರೆಗೆ ಈ ಭತ್ಯೆ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನವರಿ ಮೊದಲ ವಾರದಲ್ಲಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದು, ಮಾಸಾಂತ್ಯಕ್ಕೆ 1450 ನಿರುದ್ಯೋಗಿಗಳು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
3440 ವಿದ್ಯಾರ್ಥಿಗಳು ಅರ್ಹ: ಜಿಲ್ಲೆಯಲ್ಲಿ ಪದವಿ ಮತ್ತು ಪಿಜಿ ಮುಗಿಸಿದವರು ಮತ್ತು ಸ್ನಾತಕೋತರ ಮತ್ತು ಪದವಿ ಮತ್ತು ಇಂಜಿನಿಯರಿಂಗ್, ಡಿಪ್ಲೊಮಾ ಮುಗಿಸಿದ 3440 ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಗ್ರಿ ಮತ್ತು ಪಿಜಿಯಲ್ಲಿ ಉತ್ತೀರ್ಣರಾದವರು 2796, ಸ್ನಾತಕೋತರ ಮತ್ತು ಬಿಇ ಪದವಿ ಪಡೆದವರು 796, ಇಂಜಿನಿಯರಿಂಗ್ 546, ಡಿಪ್ಲೊಮಾ ಮಾಡಿದ 98 ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿದ್ದಾರೆ. 2022- 23ನೇ ಉತ್ತೀರ್ಣರಾದವರು ಪದವಿ ಪಡೆದು 6 ತಿಂಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.
ಎಲ್ಲರೂ ಅರ್ಹರಲ್ಲ: ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವರು ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಯುವನಿಧಿಗೆ ಅರ್ಹರಲ್ಲ. ಇಂಥವರು ಅರ್ಜಿ ಸಲ್ಲಿಸಿದರೆ ಅದು ತಿರಸ್ಕೃತಗೊಳ್ಳಲಿದೆ.
ನೋಂದಣಿಗೆ ನಿರಾಸಕ್ತಿ: ಯುವ ನಿಧಿ ಯೋಜನೆ ಯಶಸ್ವಿಗೊಳಿಸಲು ಜಿಲ್ಲಾಡಳಿತ ವ್ಯಾಪಕ ಪ್ರಚಾರ ನೀಡುತ್ತಿದೆ. ಆದರೆ, ಜಿಲ್ಲಾಡಳಿತ ನಿರೀಕ್ಷಿದಷ್ಟು ನೋಂದಣಿಯಾಗುತ್ತಿಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮೂಲಕ ಪ್ರತಿ ಕಾಲೇಜು ಗ್ರಾಮಗಳಲ್ಲೂ ಯುವ ನಿಧಿ ಯೋಜನೆಯ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ಕೆಲವರು ದಾಖಲೆಗಳ ಕೊರತೆಯಿಂದ ನೋಂದಣಿಯಿಂದ ದೂರ ಉಳಿಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ತಾಂತ್ರಿಕ ದೋಷದಿಂದಲೂ ನೋಂದಣಿ ಕಾರ್ಯಕ್ಕೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಅಭ್ಯರ್ಥಿಗಳು ನೇರನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಆಧಾರ್ ಸಂಖ್ಯೆಗೆ ಸೇರ್ಪಡೆಯಾದ ಬ್ಯಾಂಕ್ ಖಾತೆ ಹೊಂದಿರಬೇಕು, ಅಭ್ಯರ್ಥಿಗಳು ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯುವ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅಭ್ಯರ್ಥಿಗಳು ಯುವ ನಿಧಿ ಯೋಜನೆ ಅಡಿ ಸೇವಾ ಸಿಂಧು ಪೋರ್ಟಲ್‌ನಲ್ಲೂ ನೋಂದಾಯಿಸಿಕೊಳ್ಳಬಹುದು.
ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲೂ ಯುವನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಯುವನಿಧಿ ಯಶಸ್ಸಿಗೆ ಪ್ರಯತ್ನಿಸಲಾಗುತ್ತಿದೆ. ನಿರುದ್ಯೋಗಿ ಯುವಕರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೆ ನಾಲ್ಕೂ ತಾಲೂಕುಗಳಿಂದ ಒಟ್ಟ್ಟು 1450 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ಜಗನ್ನಾಥ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ