

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಮ್ಮ ನಾಡಿನ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಉತ್ತರ ವಿಶ್ವ ವಿದ್ಯಾನಿಲಯ ಟಮಕ, ನೆಹರು ಯುವ ಕೇಂದ್ರ ಹಾಗೂ ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಕಲಾ ಪ್ರತಿಭೆಗಳನ್ನು ಪ್ರದರ್ಶಿಸಲು ಯುವಜನೋತ್ಸವ ಕಾರ್ಯಕ್ರಮ ಪ್ರಮುಖ ವೇದಿಯಾಗಿದೆ. ಯುವ ಜನತೆ ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಮುಂದಿನ ಯುವಪೀಳಿಗೆಗೂ ಪ್ರೇರಣೆಯಾಬೇಕು ಎಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಕಲೆಗಳ ಬಗ್ಗೆ ಜನರಿಗೆ ಆತ್ಮ ವಿಶ್ವಾಸ ಕುಂದುತ್ತಿದೆ. ಮಕ್ಕಳು ಮತ್ತು ಯುವಜನರು ಮೊಬೈಲ್ ನ್ನು ಬದಿಗಿಟ್ಟು, ಶಿಕ್ಷಣಕ್ಕೆ ಪ್ರಧಾನ ಅದ್ಯತೆ ನೀಡಬೇಕು ಎಂದು ಹೇಳಿದರು.
ಒಂದು ದಿನಕ್ಕೆ ಸೀಮಿತವಾಗಬಾರದು: ಯುವ ಸಮೂಹದವರು ಶಿಕ್ಷಣ, ವಿವಿಧ ವೃತ್ತಿಪರ ಕೋರ್ಸ್‌ಗಳೊಂದಿಗೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಜಾನಪದ ಕಲೆಗಳನ್ನು ಬೆಳೆಸುವಲ್ಲಿ ಮುಂದಾಗಬೇಕು ಎಂದು ಸಿಇಒ ಅನುರಾಧಾ ಕರೆ ನೀಡಿದರು. ಈ ರೀತಿಯ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳಗಬೇಕು, ನಮ್ಮ ಜಾನಪದ ಕಲೆ, ಸಂಸ್ಕೃತಿಯನ್ನು ದೇಶವ್ಯಾಪಿ ಪ್ರಚುರಪಡಿಸಲು ಯುವ ಪೀಳಿಗೆ ಶ್ರಮ ವಹಿಸಬೇಕು ಎಂದು ಪ್ರೋತ್ಸಾಹ ತುಂಬಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಿ: ನಿಮ್ಮ ಮುಂದಿನ ಭವಿಷ್ಯವನ್ನು ಉಜ್ಬಲಗೊಳಿಸುವತ್ತ ವಿದ್ಯಾರ್ಥಿಗಳು ಗಮನ ನೀಡಬೇಕು. ಇಲ್ಲ ಸಲ್ಲದ ವಿಷಯಗಳಿಗೆ ತಲೆಕೊಡದೆ ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸಬೇಕು ಎಂದು ಸಿಇಒ ಕಿವಿಮಾತು ಹೇಳಿದರು. ಕೇವಲ ಮೊಬೈಲ್ ನೋಡುವುದರಿಂದಜೀವನವನ್ನು ವ್ಯರ್ಥ ಮಾಡದೆ, ಪ್ರತಿ ಗ್ರಾಮದಲ್ಲಿರುವ ಅರಿವು(ಗ್ರಂಥಾಲಯಗಳು) ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಯುವಜನತೆ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಯುವಜನೋತ್ಸವ ಹಬ್ಬ: ಯುವಜನೋತ್ಸವ ಎನ್ನುವುದು ಹಬ್ಬವಿದ್ದಂತೆ, ಇಂದಿನ ಯುವಜನರನ್ನು ವಿವಿಧ ಕ್ರೀಡೆಗಳು, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಉತ್ತೇಜಿಸಲು ಇದೊಂದು ಪ್ರಮುಖ ವೇದಿಕೆಯಾಗಿದೆ ಎಂದು ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ ಹೇಳಿದರು. ಪ್ರತೀ ವರ್ಷವೂ ಜಿಲ್ಲೆಯಲ್ಲಿ ಯುವಜನೋತ್ಸವ ಹಮ್ಮಿಕೊಂಡು ಬರಲಾಗುತ್ತಿದೆ, ವರ್ಷದಿಂದ ವರ್ಷಕ್ಕೆ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.
ಹಲವು ಸ್ಪರ್ಧೆಗಳು: ಕಾರ್ಯಕ್ರಮದಲ್ಲಿ ಜಾನಪದ ಗೀತೆ, ನೃತ್ಯ, ಚಿತ್ರಕಲೆ ಹಾಗೂ ಕವಿತೆ ಬರೆಯುವ ಸ್ಪರ್ಧೆ ಮತ್ತು ವಿಜ್ಞಾನ ಮೇಳ ಸೇರಿ ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 100 ಜನ ಸ್ಪರ್ಧಿಗಳು ಭಾಗವಹಿಸಿದ್ದರು, ವಿಜೇತರಿಗೆ ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದವರಿಗೆ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದರು. ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು.