

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜನಸಂಖ್ಯೆಯಲ್ಲಿ ಶೇ. 60 ಯುವಕರಿಂದ ಕೂಡಿದ ದೇಶ ನಮ್ಮದು, ನಮ್ಮ ಯುವಶಕ್ತಿಯೇ ಭಾರತದ ನಿಜವಾದ ಆಸ್ತಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಹೇಳಿದರು.
ನವದೆಹಲಿಯ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೇವನಹಳ್ಳಿ ಇವರ ಸಹಯೋಗದೊಂದಿಗೆ ಶನಿವಾರ ದೇವನಹಳ್ಳಿ ಟೌನ್ ನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ಜನತೆಗೆ ಸರಿಯಾದ ಮಾರ್ಗ ತೋರಿಸುವ ಮೂಲಕ ದೇಶದ ಬಹುದೊಡ್ಡ ಆಸ್ತಿಯನ್ನು ಸಂರಕ್ಷಣೆ ಮಾಡುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇದೆ, ಶಾಲಾ-ಕಾಲೇಜು ಹಂತದಲ್ಲೇ ಯುವ ಸಮೂಹಕ್ಕೆ ಕೌಶಲಭರಿತ ಶಿಕ್ಷಣ ನೀಡುವ ಕೆಲಸ ಆಗಬೇಕು ಈ ಮೂಲಕ ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಲು ಸಹಕಾರ ನೀಡಬೇಕು ಎಂದು ಹೇಳಿದರು.
ವೀರ ಸನ್ಯಾಸಿ, ವಿಶ್ವವಿಜೇತ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ದೇಶದಾದ್ಯಂತ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಯುವ ಜನತೆಗೆ ಸಾಂಸ್ಕೃತಿಕ, ಕಲಾತ್ಮಕವಾಗಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳು, ಅವರಲ್ಲಿನ ಧೀರತೆ, ದೇಶಾಭಿಮಾನವನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸ್ಮರಿಸಬೇಕು ಎಂದು ಕರೆ ನೀಡಿದರು.
ಯೋಜನೆ ಸದುಪಯೋವಾಗಬೇಕು: ಕೇಂದ್ರ ಸರ್ಕಾರ ಯುವ ಸಮೂಹದ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ವಿದ್ಯಾಲಕ್ಷ್ಮೀ ಯೋಜನೆಗಳು ಪ್ರಮುಖವಾಗಿವೆ. ಇಂಥ ಯೋಜನೆಗಳ ಮೂಲಕ ಕೌಶಲ ತರಬೇತಿ ಹಾಗೂ ಉನ್ನತ ಶಿಕ್ಷಣಕ್ಕೆ ಸಾಲ-ಸೌಲಭ್ಯಗಳನ್ನು ಒದಗಿಸುತ್ತಿದೆ. ಸರ್ಕಾರದ ಯೋಜನೆಗಳನ್ನು ಯುವ ಸಮೂಹ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರು ಮನವಿ ಮಾಡಿದರು.
ಮಳಿಗೆಗಳ ಆಕರ್ಷಣೆ:
ಯುವ ಜನೋತ್ಸವದ ಅಂಗವಾಗಿ ದೇವನಹಳ್ಳಿ ಟೌನ್‌ನ ಸರ್ಕಾರಿ ಕಾಲೇಜು ಮೈದಾನದಲ್ಲಿ ವಿವಿಧ ಪುಸ್ತಕಗಳ ಮಳಿಗೆಗಳನ್ನು ತೆರೆಯಲಾಗಿತ್ತು. ಸಂಸದ ಡಾ.ಕೆ.ಸುಧಾಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಸರ್ಕಾರದ ಯೋಜನೆಗಳನ್ನು ಲಾನುಭವಿಗಳಿಗೆ ವಿತರಿಸಲಾಯಿತು. ಇದಕ್ಕೂ ಮೊದಲು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸಂಸದರು ಪುಷ್ಪಾರ್ಚನೆ ಅರ್ಪಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲಾಗಿತ್ತು. ಯುವಕ ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.