

ಗಂಗಾವತಿ: ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಪ್ರಸಕ್ತ ಸಾಲಿನ ಪಠ್ಯಕ್ರಮ ಪೂರ್ಣಗೊಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಯುವ ಉತ್ತೇಜನಾ ಸೇನಾ ಪಡೆ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕು ಆಡಳಿತ ಸೌಧದ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಹಿನ್ನೆಲೆಯಲ್ಲಿ 15 ದಿನಗಳಿಂದ ತರಗತಿಗಳು ನಡೆಯುತ್ತಿಲ್ಲ. ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ, ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಿಂದ ತಾಲೂಕು ಆಡಳಿತ ಸೌಧದವರೆಗೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಖಾಲಿ ನೋಟಬುಕ್‌ಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳು, ಪಠ್ಯ ಕ್ರಮ ಕಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಸಮಿತಿ ಜಿಲ್ಲಾ ಸಂಚಾಲಕ ಸರ್ವಜ್ಞಮೂರ್ತಿ ಮಾತನಾಡಿ, ಬಹುತೇಕ ಸರ್ಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು, ಧರಣಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪಠ್ಯಕ್ರಮ ಪೂರ್ಣಗೊಳ್ಳದಿದ್ದರಿಂದ ಪರೀಕ್ಷೆ ಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕಿದ್ದು, ಬಾಕಿ ವೇತನ ಕೂಡಲೇ ಪಾವತಿಸಬೇಕು. ಪ್ರವೇಶ ಶುಲ್ಕ ಕಡಿಮೆ ಮಾಡುವುದು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್2 ತಹಸೀಲ್ದಾರ್ ಮಹಾಂತಗೌಡಗೌಡಗೆ ಮನವಿ ಸಲ್ಲಿಸಿದರು.
ಪದಾಧಿಕಾರಿಗಳಾದ ಬಸವ ಚೇತನ್ ಅಚ್ಚಪ್ಪ, ಆಂಜನೇಯ, ಅಯ್ಯನಗೌಡ, ಕೌಸ್ತುಬ್ ದಂಡಿನ್, ಪ್ರಜ್ವಲ್ ದೇವಲಾಪುರ ಮಠ, ಭೂಮಿಕಾ, ಶಿವನಗೌಡ ಜಂತಕಲ್, ಕಲ್ಲೇಶ, ವಿಕಾಸ್, ವಾಸುದೇವ, ಯಶವಂತ, ಪುನೀತ್ ಇತರರಿದ್ದರು.