

ಉಡುಪಿ: ಬೆಂಗಳೂರು, ಚೆನ್ನೈ, ಬಾಂಬೆ ಮುಂತಾದ ಮಹಾನಗರಗಳಲ್ಲಿ ಮತದಾನ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇದ್ದು, ಯುವಜನರು ಮತದಾನದಿಂದ ದೂರ ಉಳಿದರೆ ಪ್ರಜಾಪ್ರಭುತ್ವ ಪತನವಾಗಲಿದೆ. ಹೀಗಾಗಿ ಯುವಜನತೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಹೊಂದಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದರು.
ಮಂಗಳವಾರ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಅದಮಾರು ಮಠ, ಶ್ರೀಕೃಷ್ಣ ಸೇವಾ ಬಳಗ ಆಶ್ರಯದಲ್ಲಿ ವಿಶ್ವಾರ್ಪಣಮ್ ಕಾರ್ಯಕ್ರಮದ ಅಂಗವಾಗಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನನ್ನ ಒಂದು ಮತದಿಂದ ಏನಾಗಲಿದೆ ಎಂಬ ಉದಾಸೀನತೆ ಸಲ್ಲದು. ಪಾಕಿಸ್ತಾನ ಮತ್ತು ಭಾರತ ಕೇವಲ 24 ಗಂಟೆಯ ಅಂತರದಲ್ಲಿ ಸ್ವಾತಂತ್ರೃವನ್ನು ಪಡೆದ ದೇಶಗಳಾಗಿವೆ. ಆದರೆ ಇಂದು ಎರಡೂ ದೇಶಗಳನ್ನು ತುಲನೆ ಮಾಡಿದರೆ ಭಾರತ ಹೆಚ್ಚಿನ ಪ್ರಗತಿ ಕಾಣಲು ಪ್ರಜಾಪ್ರಭುತ್ವ ಚೆನ್ನಾಗಿರುವುದೇ ಮುಖ್ಯ ಕಾರಣವಾಗಿದೆ. ಪಾಕಿಸ್ತಾನ ಈವರೆಗೆ 20 ಪ್ರಧಾನಿಗಳನ್ನು ಕಂಡಿದ್ದರೂ ಒಬ್ಬರೂ 5 ವರ್ಷ ಅವಧಿಯನ್ನು ಪೂರ್ಣಗೊಳಿಸಿಲ್ಲ. ಭಾರತದ 14 ಪ್ರಧಾನ ಮಂತ್ರಿಗಳಲ್ಲಿ 8 ಮಂದಿ ಪೂರ್ಣಾವಧಿ ಕಾರ್ಯನಿರ್ವಹಿಸಿದ್ದಾರೆ. 1963ರವರೆಗೆ ಪಾಕಿಸ್ತಾನದ ಜಿಡಿಪಿ ಭಾರತಕ್ಕಿಂತ ಹೆಚ್ಚಿತ್ತು. ನಂತರ ಸ್ಥಿರ ಸರ್ಕಾರಗಳಿಲ್ಲದ ಕಾರಣ ಆರ್ಥಿಕತೆ ಸಂಪೂರ್ಣ ಪತನವಾಗಿದೆ ಎಂದರು.
2014ರಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಆರ್ಥಿಕತೆ ಇಂದು 5ನೇ ಸ್ಥಾನಕ್ಕೆ ಏರಿಕೆಯಾಗಿದೆ. 2047ರವರೆಗಿನ ಅಮೃತ ಕಾಲದಲ್ಲಿ ಪ್ರಥಮ ಸ್ಥಾನಕ್ಕೆ ತಲುಪುವ ಗುರಿ ಹೊಂದಲಾಗಿದೆ. ಯುನಿಕಾರ್ನ್‌ಗಳ ಸಂಖ್ಯೆ 3 ರಿಂದ 107ಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲೇ 37 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಕಳೆದ 9 ವರ್ಷದಲ್ಲಿ ದೇಶದಲ್ಲಿ ಸಮಗ್ರ ಬದಲಾವಣೆಯಾಗುತ್ತಿದ್ದು, ದೇಶದ ಎಲ್ಲೆಡೆ ನಡೆಯುತ್ತಿದ್ದ ಬಾಂಬ್ ಸ್ಫೋಟಗಳಿಗೆ ಬ್ರೇಕ್ ಬಿದ್ದಿದೆ. ಕಾಶ್ಮೀರ ಹಾಗೂ ಈಶಾನ್ಯ ಭಾರತದ ಅನೇಕ ಸ್ಥಳಗಳಿಗೆ ಭೇಟಿ ನೀಡಲು ಸ್ಥಳೀಯ ಜಿಲ್ಲಾಡಳಿತದ ಅನುಮತಿ ಅಗತ್ಯವಿತ್ತು. 2019ರಲ್ಲಿ ಕಾಶ್ಮೀರದ ಆರ್ಟಿಕಲ್ 370 ತೆಗೆದು ಹಾಕಿದ ಮೇಲೆ ಈವರೆಗೆ ಕಾಶ್ಮೀರಕ್ಕೆ 1 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಯೋತ್ಪಾದನೆಯಿಂದ ಸಾಯುವವ ನಾಗರಿಕರ ಸಂಖ್ಯೆ 100ಕ್ಕಿಂತ ಕಡಿಮೆಯಾಗಿದೆ. ಹಿಂದೆ ಈ ಪ್ರಮಾಣ 1 ಸಾವಿರಕ್ಕಿಂತ ಹೆಚ್ಚು ಇತ್ತು. ನಕ್ಸಲ್ ಹಿಂಸಾಚಾರ ತೀವ್ರ ಇಳಿಕೆಯಾಗಿದ್ದು, ಕಾಠ್ಮಂಡುವಿನಿಂದ ತಿರುಪತಿವರೆಗಿದ್ದ ನಕ್ಸಲ್ ಕಾರಿಡಾರನ್ನು ಭಂಗಗೊಳಿಸಲಾಗಿದೆ ಎಂದರು.
ಪೂರ್ಣಪ್ರಜ್ಞ ಆಡಳಿತ ಮಂಡಳಿ ಸದಸ್ಯ ಡಾ. ಕರುಣಾಕರ್ ಸಂವಾದ ನಡೆಸಿಕೊಟ್ಟರು. ಯುವ ಸಂವಾದ ಸಹಸಂಚಾಲಕ ಕ್ಯಾ. ಬ್ರಜೇಶ್ ಚೌಟ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀರಕ್ಷ ಹೆಗಡೆ ಪ್ರಾರ್ಥಿಸಿದರು. ಪಿಪಿಸಿ ಆಡಳಿತಾಧಿಕಾರಿ ಡಾ. ಎ.ಪಿ. ಭಟ್ ವಂದಿಸಿದರು. ನಾ, ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.