

ಹಾಸನ: ಸಹಕಾರದ ಮೂಲತತ್ವವಾದ ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು ಎಂಬುದನ್ನು ಚಿಕ್ಕಂದಿನಿಂದಲೇ ಕಲಿಯಬೇಕು ಎಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಪ್ರಾಂಶುಪಾಲ ಡಾ.ಇರ್ಷಾದ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬೆಂಗಳೂರು, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಹಾಸನ ಸಹಕಾರ ಹಾಲು ಒಕ್ಕೂಟ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಮತ್ತು ಸಹಕಾರ ಇಲಾಖೆ ಆಶ್ರಯದಲ್ಲಿ ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಹಕಾರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಇಂದು ವಿವಿಧ ರೀತಿಯ ಸಹಕಾರ ಸಂಘಗಳಿದ್ದು, ಯವಜನರು ಹೆಚ್ಚಿನ ಸಂಖ್ಯೆಯಲ್ಲಿ ಅದರ ಸದುಪಯೋಗ ಪಡೆಯಬೇಕು. ಮನುಷ್ಯ ತನಗಾಗಿ ಬದುಕುವುದು ಸಹಜ. ಇರುವ ಸಮಯದಲ್ಲಿ ಇತರರಿಗಾಗಿ ಸ್ವಲ್ಪ ಸಮಯವನ್ನು ಮೀಸಲಿರಿಸುವುದು, ಅವರ ಕಷ್ಟಗಳಿಗೆ ಸಹಕರಿಸುವುದು ಮುಖ್ಯ. ಈ ದಿಸೆಯಲ್ಲಿ ಯುವಜನರು ಗಮನ ಹರಿಸಿ ಮುಂದುವರಿಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಪ್ರಕಾಶ್ ಮಾತನಾಡಿ, ಪ್ರಸ್ತುತ ವಿವಿಧ ರೀತಿಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ರೈತರು, ಸಹಕಾರಿಗಳು ಅರ್ಥಿಕ ಅಭಿವೃದ್ಧಿ ಹೊಂದಲು ಸಹಕಾರ ಸಂಘಗಳು ಉಪಯುಕ್ತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವಿ.ಎನ್. ರಾಜಣ್ಣ, ಒಕ್ಕೂಟದ ಉಪಾಧ್ಯಕ್ಷ ಸೋಮೇಗೌಡ, ನಿರ್ದೇಶಕ ವಿ.ಎನ್.ರಾಜಣ್ಣ, ನಾಗರಾಜು, ಪುಟ್ಟಸ್ವಾಮಿಗೌಡ, ಪದ್ಮರಾಜು, ಸೋಮಣ್ಣ ಇತರರು ಇದ್ದರು.