ಯುವ ಸಂಭ್ರಮದಲ್ಲಿ ನಾರಿ ಪ್ರತಿಭೆ ಅನಾವರಣ

mysore
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ‘ಯುವ ಸಂಭ್ರಮ’ದಲ್ಲಿ ನಾರಿ ಪ್ರತಿಭೆ ಅನಾವರಣಗೊಂಡಿತು.


ದಿನಕ್ಕೊಂದು ವಿಷಯ ಆಧಾರಿತವಾಗಿ ಕಂಗೊಳಿಸುವ ಯುವ ಸಂಭ್ರಮವು ಇಂದು ಮಹಿಳಾಮಣಿಗಳ ಪ್ರತಿಭೆಗೆ ವೇದಿಕೆ ಆಯಿತು. ಯುವತಿಯರ ನೃತ್ಯಕ್ಕೆ ಯುವಜನತೆ ನಿಬ್ಬೆರಗಾದರು.

ವಿವಿಧ ಕಾಲೇಜು ವಿದ್ಯಾರ್ಥಿನಿಯರು ವಿವಿಧ ವಿಷಯಗಳಿಗೆ ನೃತ್ಯ ವಾಡಿ ಪ್ರೇಕ್ಷಕರನ್ನು ರಂಜಿಸಿದರು. ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಎನ್ನುವ ರೀತಿಯ ಯುವ ಸಂಭ್ರಮ ಒಂದು ದಿನದ ಮಟ್ಟಿಗೆ ಕಂಗೊಳಿಸಿತು.

46 ಕಲಾ ತಂಡಗಳು ಜಾನಪದ ಗೀತೆಯ ಜತೆಗೆ ಆಧುನಿಕ ರ‌್ಯಾಪ್ ಸಾಂಗ್ ಗೀತೆಗೂ ಹೆಜ್ಜೆ ಹಾಕಿದವು. ಮಂಡ್ಯ ಜಿಲ್ಲೆಯ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಮಹಿಳಾ ಸಬಲೀಕರಣ ಹಾಗೂ ಸ್ವಯಂರಕ್ಷಣಾ ಕಲೆಯ ಪ್ರದರ್ಶನ ಗಮನ ಸೆಳೆಯಿತು.

ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ‘ಅರ್ಜುನ’ ಆನೆ ಕುರಿತು ನೃತ್ಯ ಪ್ರದರ್ಶಿಸಿ ಮಾಜಿ ಅಂಬಾರಿ ಆನೆಯನ್ನು ಸ್ಮರಿಸಿದರು. ನಜರ್‌ಬಾದ್‌ನ ಶ್ರೀ ವಾಣಿವಿಲಾಸ ಅರಸು ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ‘ಮರೆಯೋದು ಉಂಟೇ ಮೈಸೂರು ಒಡೆಯ’, ‘ಮೈಸೂರು ದಸರಾ ಎಷ್ಟೊಂದು ಸುಂದರ’ ಗೀತೆಗೆ ಹೆಜ್ಜೆ ಹಾಕಿ ನಾಡಿಗೆ ಮೈಸೂರು ಮಹಾರಾಜರ ಕೊಡುಗೆಗಳನ್ನು ಅನಾವರಣಗೊಳಿಸಿದರು.

ನಂಜನಗೂಡಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶಿವ ತಾಂಡವ ಹಾಡಿಗೆ ನೃತ್ಯ ಮಾಡಿದರು. ಸರಸ್ವತಿಪುರಂನ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮಹಿಳಾ ಸಬಲೀಕರಣ ವಿಷಯ ಕುರಿತು ಹಾಡಿಗೆ ಹೆಜ್ಜೆ ಹಾಕಿ ಸಭಿಕರನ್ನು ರಂಜಿಸಿದರು.


ಮದ್ದೂರಿನ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ದೇಶಭಕ್ತಿ, ಸ್ವಾತಂತ್ರೃ ಚಳವಳಿ ಹೋರಾಟಗಾರರ ಕೊಡುಗೆ ಕುರಿತ ನೃತ್ಯ ಪ್ರದರ್ಶನ ಮಾಡಿದರು.

ಚಾಮರಾಜನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಸಂವಿಧಾನ ಕುರಿತ ನೃತ್ಯಕ್ಕೆ ಹೆಜ್ಜೆ ಹಾಕಿ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಕುರಿತು ಜಾಗೃತಿ ಜ್ಯೋತಿ ಮೂಡಿಸಿದರು. ಬೆಂಗಳೂರಿನ ಶ್ರೀ ವಿನಾಯಕ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕನ್ನಡ ವೈಭವದ ಗೀತೆಗೆ ನೃತ್ಯ ಮಾಡಿ ಕನ್ನಡಕಂಪು ಸಾರಿದರು.

ಮಹಿಳಾ ಸಾಧಕಿಯರಿಗೆ ಸನ್ಮಾನ..

ಮಹಿಳಾ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ, ಹಿಮಾಲಯ ಪರ್ವತಾರೋಹಿ ಡಾ.ಉಷಾ ಹೆಗ್ಡೆ, ಅಂತಾರಾಷ್ಟ್ರೀಯ ಯೋಗಪಟು ಖುಷಿ, ಫ್ಯಾಶನ್ ಡಿಸೈನರ್ ಪಾಲಾಶ್ ಬಿದಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net