

ಅಂಕೋಲಾ: ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಮೇ 12ರಂದು 12ನೇ ವರ್ಷದ ಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಾಂವಕರ ಮೆಮೋರಿಯಲ್ ಫೌಂಡೇಷನ್ ಅಧ್ಯಕ್ಷ ದೇವಾನಂದ ಬಿ. ಗಾಂವಕರ ತಿಳಿಸಿದರು.
ಸೋಮವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿಶ್ವದ ಮೊದಲ ಮಹಿಳಾ ರುದ್ರವೀಣಾ ವಾದಕಿ ವಿದುಷಿ ಜ್ಯೋತಿ ಹೆಗಡೆ ಶಿರಸಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಕಿತ್ತೂರು ರಾಣಿ ಚೆನ್ನಮ್ಮನ ವಂಶಸ್ಥರಾದ ಸೋಮಶೇಖರ ವಿಶ್ವನಾಥ ದೇಸಾಯಿ, ಬೆಂಗಳೂರಿನ ಅಸಿಸ್ಟಂಟ್ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಆಡಳಿತ) ಡಾ. ಸುಮನ್ ಡಿ. ಫೆನ್ನೆಕರ್ ಅವರು ಯುವ ಜನಾಂಗ-ಭವಿಷ್ಯದ ಭಾರತ ಉಪನ್ಯಾಸ ನೀಡಲಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 10 ಯುವ ಪ್ರತಿಭೆಗಳಿಗೆ ಪುರಸ್ಕಾರ ನಡೆಯಲಿದೆ ಎಂದರು.
ಕವಯಿತ್ರಿ ಅಕ್ಷತಾ ಕೃಷ್ಣಮೂರ್ತಿ ಮಾತನಾಡಿ, ಅಂಕೋಲಾ ಕಣಗೀಲದ ಕಾಣಿ ಬೊಮ್ಮಕ್ಕನ ಸ್ಮರಣೆ ಹಾಗೂ ವಿದ್ಯಾ ಸಂಸ್ಥೆಗಳಿಗೆ ಪುಸ್ತಕ ಕೊಡುಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಅಕ್ಷಯ ಆರ್. ಗಾಂವಕರ, ಭರತರಾಜ ಡಿ. ಗಾಂವಕರ, ಪ್ರಜ್ಞಾ ಎನ್. ನಾಯಕ ಬೆಂಗ ಳೂರು, ವಿನಯ ಆರ್.ನಾಯಕ, ವನಿತಾ ಡಿ.ಗಾಂವಕರ, ಗೋಪಾಲ ಆರ್.ನಾಯಕ, ಮುಕುಂದ ಎಂ. ನಾಯಕ, ಸಚಿನ ಗುನಗಾ, ಗಣಪತಿ ಗಾಂವಕರ, ಎಂ.ಎಂ. ಕರ್ಕಿರ್, ಮಹಾಂತೇಶ ರೇವಡಿ ಇತರರಿದ್ದರು.