

ಬೆಳಗಾವಿ: ಜಾಗತೀಕರಣ ಯುಗದಲ್ಲಿ ಯುವ ಸಮುದಾಯ ವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಕರೆ ನೀಡಿದರು.
ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಾಮಾಯಣ ರಚಿಸಿದ ಇನ್ನೂ ಅನೇಕ ಸಾಹಿತ್ಯಗಳ ಕುರಿತು ಅಧ್ಯಯನವಾಗಬೇಕಾಗಿದೆ.
ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ ಮಹನೀಯರ ಆಚಾರ, ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ವಿಶ್ವಕ್ಕೆ ಮೊಟ್ಟ ಮೊದಲು ಮಹಾಕಾವ್ಯ ನೀಡಿದಂತಹ ಸಮುದಾಯ ವಾಲ್ಮೀಕಿ ಸಮುದಾಯವಾಗಿದ್ದರೂ, ನಮ್ಮ ಸಮುದಾಯ ಸಮಾಜದ ಮುಂಚೂಣಿಗೆ ಬರಲಾಗುತ್ತಿಲ್ಲ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು. ಸಮಾಜದ ಮುಖಂಡ ಯಲ್ಲಪ್ಪ ಕೊಳೇಕರ ಮಾತನಾಡಿ, ವಾಲ್ಮೀಕಿ ಸಮುದಾಯ ಧೈರ್ಯಕ್ಕೆ ಹೆಸರು ವಾಸಿಯಾದಂತಹ ಹಾಗೂ ಕೊಟ್ಟ ಮಾತನ್ನು ನಡೆಸಿ ಕೊಡುವಂತಹ ಸಮುದಾಯವಾಗಿದೆ. ಕಿತ್ತೂರು ರಾಣಿ ಚನ್ನಮ್ಮಗೆ ಕುದುರೆ ಸವಾರಿ ಕಲಿಸಿರುವುದು ನಮ್ಮ ವಾಲ್ಕೀಕಿ ಸಮುದಾಯ ಎಂದು ತಿಳಿಸಿದರು. ಈ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ, ಪಿಎಚ್‌ಡಿ ಪದವಿ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗಣ್ಯರು ಸನ್ಮಾನಿಸಿದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿ.ಪಂ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳಿ, ಸಾಹಿತಿ ಸರಜೂ ಕಾಟ್ಕರ, ಮಲ್ಲೇಶಿ ಚೌಗುಲೆ ಇತರರಿದ್ದರು.
ರಾಮಾಯಣ ಮಹಾನ್ ದೃಶ್ಯ ಕಾವ್ಯ ಬೆಳಗಾವಿ: ಮಹರ್ಷಿ ವಾಲ್ಮೀಕಿಯ ರಾಮಾಯಣ ಜಗತ್ತಿಗೆ ಮಹಾನ್ ದೃಶ್ಯ ಕಾವ್ಯವಾಗಿದೆ ಎಂದು ಶಿಕ್ಷಕ ಬಿ.ಎನ್. ಮಡಿವಾಳರ ಹೇಳಿದರು. ತಾಲೂಕಿನ ಕಾಕತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಕೃಷ್ಣಾ ಕುರುಬರ, ಅಶೋಕ ಖೋತ, ಲಲಿತಾ ಮಹಜನಶೆಟ್ಟಿ, ಸುಮಿತ್ರಾ ಕುರವಿನಕೊಪ್ಪ, ಸುವರ್ಣಾ ಕೋಲಕಾರ, ಗೀತಾ ಕಾನಟ್ಟಿ, ಶಶಿಕಲಾ ಹೊಸೂರ, ಗೀತಾ ಗುಡಿ, ಶಕುಂತಲಾ ಕರಾಳೆ, ಮಹೇಶ ಅಕ್ಕಿ ಹಾಗೂ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು. ವಿಜಯ ರಾಜಮನಿ ಸ್ವಾಗತಿಸಿದರು. ಶಿವಾನಂದ ತಲ್ಲೂರ ನಿರೂಪಣೆ ಮಾಡಿದರು. ಶ್ರೀದೇವಿ ದಿಬ್ಬಿ ವಂದಿಸಿದರು.
ಕೋಟೆ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೋಟೆ ಕೆರೆ, ಅಶೋಕ ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರಕ್ಕೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಗೆ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಜಾನಪದ ಕಲಾತಂಡಗಳು ಮೆರಗು ತಂದವು. ಡಿಸಿ ಮೊಹಮ್ಮದ ರೋಷನ್, ಎಸ್‌ಪಿ ಡಾ.ಭೀಮಾಶಂಕರ ಗುಳೇದ, ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ರಾಹುಲ್ ಶಿಂಧೆ ಇತರರಿದ್ದರು.