

ಮಂಡ್ಯ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಯುವನಿಧಿ’ ಯೋಜನೆಗೆ ಪಾಂಡವಪುರ ತಾಲೂಕಿನಲ್ಲಿ ಉಪವಿಭಾಗಾಧಿಕಾರಿ ನಂದೀಶ್ ಭಿತ್ತಿಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಪದವಿ ಪೂರೈಸಿದ ನಿರುದ್ಯೋಗಿಗಳಿಗೆ ತಿಂಗಳಿಗೆ 3 ಸಾವಿರ ರೂ, ಡಿಪ್ಲೊಮೊ ಪೂರ್ಣಗೊಳಿಸಿದವರಿಗೆ 1,500 ರೂ ನೀಡಲಾಗುವುದು. ಈ ಯೋಜನೆಯು ಮುಂದಿನ ಎರಡು ವರ್ಷ ಚಾಲ್ತಿಯಲ್ಲಿರಲಿದೆ. ಯೋಜನೆಗೆ ಒಳಪಡುವಂತಹ ವಿದ್ಯಾರ್ಥಿಗಳು 6 ವರ್ಷಗಳಿಂದ ರಾಜ್ಯದಲ್ಲಿಯೇ ವಾಸವಿರಬೇಕು. 2023ರಲ್ಲಿ ವ್ಯಾಸಂಗ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದಿರುವವರು ನೋಂದಣಿ ಮಾಡಿಕೊಳ್ಳಬಹುದು ಎಂದರು.
ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಯೊಂದಿಗೆ ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೇವಾಸಿಂಧು ಕೇಂದ್ರದಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿ ಯುವಕ/ಯುವತಿಯರು ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಹಣ ಕೇಳಿದರೆ ನಮ್ಮ ಗಮನಕ್ಕೆ ತಂದರೆ ಅಂತಹವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಪಂ ಇಒ ಲೋಕೇಶ್‌ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ವೀಣಾ, ಉಪತಹಸೀಲ್ದಾರ್ ಮೋಹನ್ ಹಾಜರಿದ್ದರು.