ಯುವನಿಧಿ ಯೋಜನೆ ಸದುಪಯೋಗಪಡಿಸಿಕೊಳ್ಳಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಸಲಹೆ

yuva nidhi scheme mandya
Published on

ಮಂಡ್ಯ: ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಸದುಪಯೋಗಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸಲಹೆ ನೀಡಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಯುವನಿಧಿ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಡಿಪ್ಲೊಮಾ ಅಥವಾ ಪದವಿ ಮುಗಿದ ನಂತರ ತಕ್ಷಣ ಉದ್ಯೋಗ ಸಿಗುವುದು ಕಷ್ಟಕರವಾಗಿರುತ್ತದೆ. ಯುವ ನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಕೌಶಲ ತರಬೇತಿ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಲು ಪುಸ್ತಕ ಖರೀದಿಗಾಗಿ ಉಪಯೋಗಿಸಿ ಎಂದರು.
2022-23ನೇ ಶೈಕ್ಷಣಿಕ ಸಾಲಿನ 2023ರಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇವರಲ್ಲಿ ಪದವಿ/ಡಿಪ್ಲೊಮಾ ನಂತರ ಕನಿಷ್ಟ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಹಾಗೂ ಕರ್ನಾಟಕದಲ್ಲಿ ವಾಸವಿರುವ(ಕನಿಷ್ಟ 6 ವರ್ಷದೊಳಗೆ ಪದವಿ/ಡಿಪ್ಲೊಮಾದವರೆಗೆ ಅಧ್ಯಯನ ಮಾಡಿದವರು) ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಜಿಲ್ಲೆಯ ವಿವಿಧ ಕಾಲೇಜಿನ ಪ್ರಾಂಶುಪಾಲರು ತಮ್ಮಲ್ಲಿ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿದ್ದು, ಎಲ್ಲರಿಗೂ ಯುವ ನಿಧಿ ಯೋಜನೆಯ ಮಾಹಿತಿ ನೀಡಿ ನೋಂದಾಯಿಸಲು ಸಹಕರಿಸಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿರುವವರು ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ವೆಬ್‌ಸೈಟ್ https://sevasindhu.karnataka.gov.in ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005999918 ಯನ್ನು ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ನೋಂದಾಯಿಸಿಕೊಳ್ಳಲು ಅರ್ಹತೆ ಹೊಂದಿರುವವರು 10 ದಿಂದ 12 ಸಾವಿರ ಅಭ್ಯರ್ಥಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಿ. ಕಾಲೇಜು ಅಥವಾ ಗ್ರಾಮಗಳಲ್ಲಿ ನೋಂದಾಯಿಸಿಕೊಳ್ಳಲು ಅಭ್ಯರ್ಥಿಗಳನ್ನು ಗುರುತಿಸಿ ಒಟ್ಟುಗೂಡಿಸಿದರೆ ಶಿಬಿರವನ್ನು ಸಹ ಆಯೋಜಿಸಿಕೊಡಲಾಗುವುದು ಎಂದು ಹೇಳಿದರು.
ಜಿಪಂ ಉಪಕಾರ್ಯದರ್ಶಿ ಬಾಬು, ಯೋಜನಾ ನಿರ್ದೇಶಕರಾದ ಸಂಜೀವಪ್ಪ, ಮುಖ್ಯಯೋಜನಾಧಿಕಾರಿ ಧನುಷ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಆರ್.ನಾಗನಂದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು. ಇದೇ ಸಂದರ್ಭದಲ್ಲಿ ಯುವನಿಧಿ ಕುರಿತು ಫೋಸ್ಟರ್ ಬಿಡುಗಡೆ ಮಾಡಲಾಯಿತು.

ನೋಂದಣಿಗೆ ಅವಶ್ಯಕ ದಾಖಲೆಗಳಿವು: ಆಧಾರ್‌ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಪದವಿ/ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ/ಡಿಪ್ಲೊಮಾ ಪ್ರಮಾಣ ಪತ್ರ(ಪಿಡಿಸಿ), ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ನೋಂದಣಿ ಸಂಖ್ಯೆ, 2017ಕ್ಕೂ ಹಿಂದಿನ ಪಡಿತರ ಚೀಟಿ. ಎನ್‌ಐಒಎಸ್(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ ಓಪನ್ ಸ್ಕೂಲಿಂಗ್) ನೀಡಿದ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಒಂದು ವೇಳೆ ಎಸ್‌ಎಸ್‌ಎಲ್‌ಸಿ ನಂತರ ನೇರವಾಗಿ ಡಿಪ್ಲೊಮಾಗೆ ಸೇರ್ಪಡೆಗೊಂಡು ತೇರ್ಗಡೆಯಾಗಿದ್ದರೆ, ಅಂತಹ ವಿದ್ಯಾರ್ಥಿಗಳು 7 ರಿಂದ 10ನೇ ತರಗತಿವರೆಗಿನ ಅಂಕಪಟ್ಟಿ ಅವಶ್ಯವಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net