

ಮೈಸೂರು:2023 ರ ಸಾಲಿನಲ್ಲಿ ತೇರ್ಗಡೆಯಾದಂತಹ ಪದವೀಧರ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಂದ ಯುವನಿಧಿ ಕಾರ್ಯಕ್ರಮದಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ.
ಈಗಾಗಲೇ ಅರ್ಜಿ ಸಲ್ಲಿಸಿ ಯುವ ನಿಧಿ ಯೋಜನೆಯ ಹಣ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರತಿ ತಿಂಗಳು 25 ನೇ ದಿನಾಂಕದೊಳಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಸ್ವಯಂ ಘೋಷಣೆ ಮಾಡದೇ ಇರುವ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯಾಗುವುದಿಲ್ಲ. ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳು ಪೂರೈಸಿದ ನಂತರವೂ ನಗದು ಹಣ ಪಡೆಯದಿದ್ದರೆ ಸೇವಾ ಸಿಂಧು https://sevasindhugs.karnataka.gov.in ಪೋರ್ಟಲ್ ನಲ್ಲಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ, ತಮ್ಮ ಅರ್ಜಿಯು ಯಾವ ಕಚೇರಿಯಲ್ಲಿ ಪರಿಶೀಲನೆಗಾಗಿ ಬಾಕಿ ಇದೆ ಎಂದು ತಿಳಿದುಕೊಳ್ಳಬಹುದು.
ಅಭ್ಯರ್ಥಿಗಳು ಒಂದು ವೇಳೆ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯನ್ನು ಅಪ್ಲೋಡ್ ಮಾಡದಿದ್ದರೆ ಅಂತಹ ಅಭ್ಯರ್ಥಿಗಳು ಡಿ.ಸುಬ್ಬಯ್ಯ ರಸ್ತೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಅರ್ಜಿಯ ಒಂದು ಪ್ರತಿ, ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ ಹಾಗೂ ಒಂದು ಜೆರಾಕ್ಸ್ ಪ್ರತಿಯೊಂದಿಗೆ ಭೇಟಿ ನೀಡಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.