ಈ ಬಾರಿ ದಸರಾ ಅಪ್ಪು ಮಯ

mysore dasara appu namana1
Published on

ಎಲ್ಲೆಲ್ಲೂ ಪುನೀತ್ ರಾಜ್ ಕುಮಾರ್‌ ಗೆ ನಮನ

ಪ್ರತಿ ಕಾರ್ಯಕ್ರಮಗಳಲ್ಲೂ ಪವರ್‌ಸ್ಟಾರ್ ನೆನಪು

ಸದೇಶ್ ಕಾರ್ಮಾಡ್ ಮೈಸೂರು
ನಾಡಹಬ್ಬ ದಸರಾ ಉತ್ಸವ ಈ ಬಾರಿ ಸಂಪೂರ್ಣ ಅಪ್ಪು ಮಯವಾಗಿತ್ತು. ದಸರಾ ಉತ್ಸವದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಹಾಗೂ ಕನ್ನಡಿಗರ ಹೃದಯದಲ್ಲಿ ಅಪ್ಪು ರಾರಾಜಿಸಿದರು.

ಚಾಮುಂಡಿಬೆಟ್ಟದಲ್ಲಿ ಸೆ.26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ರಾಷ್ಟ್ರಪತಿ ಅವರ ಉಪಸ್ಥಿತಿ ಹಿನ್ನೆಲೆಯಲ್ಲಿ ದಸರಾ ಉದ್ಘಾಟನಾ ಸಮಾರಂಭಕ್ಕೆ ಸಾಕಷ್ಟು ಶಿಷ್ಟಾಚಾರಗಳು ಇದ್ದ ಕಾರಣ ಕಾರ್ಯಕ್ರಮದಲ್ಲಿ ಅಪ್ಪು ಸ್ಮರಣೆ ನಡೆಯಲಿಲ್ಲ. ನಂತರದ ಎಲ್ಲ ಕಾರ್ಯಕ್ರಮಗಳಲ್ಲೂ ನಟ ಪುನೀತ್ ರಾಜ್ ಕುಮಾರ್ ರಾರಾಜಿಸಿದರು.

ವಿಶೇಷವಾಗಿ ಯುವ ಸಂಭ್ರಮ ಹಾಗೂ ಯುವ ದಸರಾದಲ್ಲಿ ಅಪ್ಪು ರಾರಾಜಿಸಿದರು. ಯುವ ಸಂಭ್ರಮ ಹಾಗೂ ಯುವ ದಸರಾದ ಹಲವಾರು ನೃತ್ಯಗಳಲ್ಲಿ ಅಪ್ಪುವನ್ನು ಯುವಜನರು ನೆನಪಿಸಿಕೊಂಡರು. ಅಪ್ಪು ಭಾವಚಿತ್ರ ಕಾಣುತ್ತಿದ್ದಂತೆಯೇ ಯುವಜನರ ಹರ್ಷೋದ್ಘಾರ ಮುಗಿಲು ಮುಟ್ಟುತಿತ್ತು. ಅಲ್ಲದೆ ಸಾಕಷ್ಟು ಯುವಜನರು ಅಪ್ಪುವಿನ ಭಾವಚಿತ್ರವಿರುವ ಕನ್ನಡದ ಭಾವುಟವನ್ನು ಹಿಡಿದು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದದ್ದು ವಿಶೇಷವಾಗಿತ್ತು.

ಯುವ ದಸರಾದಲ್ಲಿ ‘ಅಪ್ಪು ನಮನ’:
ಈ ಬಾರಿಯ ಯುವ ದಸರಾಕ್ಕೆ ‘ಅಪ್ಪು ನಮನ’ ಕಾರ್ಯಕ್ರಮದ ಮೂಲಕ ಚಾಲನೆ ದೊರೆಯಿತು. ಮಹಾರಾಜ ಕಾಲೇಜು ಮೈದಾನ ಸಂಪೂರ್ಣ ಅಪ್ಪು ಅಭಿಮಾನಿಗಳಿಂದ ತುಂಬಿ ಹೋಗಿತ್ತು. ಯುವ ದಸರಾಕ್ಕೆ ಇತಿಹಾಸದಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸಾಗರ ಹಿಂದೆಂದೂ ಹರಿದು ಬಂದಿರಲಿಲ್ಲ. ಗಾಯಕರಾದ ಗುರುಕಿರಣ್, ಕುನಲ್ ಗಾಂಜಾವಾಲ್ ಹಾಗೂ ವಿಜಯ್ ಪ್ರಕಾಶ್ ಅವರುಗಳು ಅಪ್ಪು ಅಭಿನಯದ ಗೀತೆಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಿದರು. ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಪ್ಪು ನಮನಕ್ಕೆ ಮೆರಗು ತಂದುಕೊಟ್ಟರು. ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ‘ಗಂಧದ ಗುಡಿ’ ಚಿತ್ರದ ಟೀಸರ್‌ಅನ್ನು ಪ್ರದರ್ಶಿಶಿಸಲಾಯಿತು. ಟೀಸರ್ ಪ್ರದರ್ಶಿಸುವ ಸಂದರ್ಭ ಅಪ್ಪು ಅಭಿಮಾನಿಗಳು ‘ಅಪ್ಪು, ಅಪ್ಪು’ ಎಂದು ಘೋಷಣೆ ಕೂಗಿದರು. ಇತ್ತ ಟೀಸರ್ ನೋಡಿದ ಅಶ್ವಿನಿ ಭಾವುಕರಾಗಿ ಕಣ್ಣೀರು ಸುರಿಸಿದರು.

ಚಿತ್ರೋತ್ಸವದಲ್ಲಿ ‘ಅಪ್ಪು ದಿನ’:
ದಸರಾ ಚಲನಚಿತ್ರೋತ್ಸವವನ್ನು ಈ ಬಾರಿ ಐನಾಕ್ಸ್ ಹಾಗೂ ಡಿಆರ್‌ಸಿ ಮಲ್ಟಿಫ್ಲೆಕ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಚಿತ್ರೋತ್ಸವದಲ್ಲಿ ‘ಅಪ್ಪು ದಿನ’ ಹೆಸರಿನಲ್ಲಿ ಒಂದು ದಿನವನ್ನು ಅಪ್ಪು ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ಮೀಸಲಿಡಲಾಗಿತ್ತು. ಅಪ್ಪು ಅಭಿನಯದ ಬೆಟ್ಟದ ಹೂವು ಚಿತ್ರವನ್ನು ಐನಾಕ್ಸ್ ಮಲ್ಟಿಫ್ಲೆಕ್ಸ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಗರದ ಶಕ್ತಿ ಧಾಮ ಮಕ್ಕಳೊಂದಿಗೆ ವೀಕ್ಷಿಸಿದರು. ಈ ಚಿತ್ರೋತ್ಸವಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.


ಅಪ್ಪು ಮರಳಿನ ಕಲಾಕೃತಿ:
ದಸರಾ ವಸ್ತು ಪ್ರದರ್ಶನದಲ್ಲಿ ಇದೇ ಪ್ರಥಮ ಬಾರಿಗೆ ಸ್ಯಾಂಡ್ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಖ್ಯಾತ ಮರಳು ಕಲಾ ವಿದೆ ಗೌರಿ ಸ್ಯಾಂಡ್ ಮ್ಯೂಸಿಯಂನಲ್ಲಿ ಅಪ್ಪು ಸೇರಿದಂತೆ ವಿವಿಧ ಮಹನೀಯರ ಕಲಾಕೃತಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಯಾಂಡ್ ಮ್ಯೂಸಿಯಂನಲ್ಲಿ ಅಪ್ಪು ಕಲಾಕೃತಿ ಎಲ್ಲರ ಪ್ರಮುಖ ಆಕರ್ಷಣೆಯಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು:
ಕುಪ್ಪಣ್ಣ ಉದ್ಯಾನದಲ್ಲಿ ಹಮ್ಮಿಕೊಂಡ ಫಲಪ್ಪು ಪ್ರದರ್ಶನದಲ್ಲಿ ಅಪ್ಪುವಿಗೆ ವಿಶೇಷ ನಮನ ಸಲ್ಲಿಸುವ ಕಾರ್ಯ ನಡೆಯಿತು. ಡಾ.ರಾಜ್ ಕುಮಾರ್ ಹುಟ್ಟಿದ ಗಾಜನೂರು ಮನೆಯ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲದೆ ಅಪ್ಪು ಹಾಗೂ ಡಾ. ರಾಜ್ ಕುಮಾರ್ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿದ ಜನರು ಈ ಕಲಾಕೃತಿಯ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊ ಂಡರು. ಅರಮನೆ ಆವರಣದಲ್ಲಿ ಹಮ್ಮಿಕೊಂಡ ಫಲಪುಷ್ಪ ಪ್ರದರ್ಶನದಲ್ಲೂ ಅಪ್ಪು ಭಾವಚಿತ್ರ ಇಟ್ಟು ಗೌರವ ಸಲ್ಲಿಸಲಾಯಿತು.

ಅಪ್ಪುವನ್ನು ಸ್ಮರಿಸಿದ ಕವಿಮನ:
ದಸರಾ ಕವಿಗೋಷ್ಠಿ ಉಪ ಸಮಿತಿ ಹಮ್ಮಿಕೊಂಡ ಕವಿಗೋಷ್ಠಿಗಳಲ್ಲಿ ಕವಿಗಳು ಅಪ್ಪು ಕುರಿತು ಕವನಗಳನ್ನು ರಚಿಸಿ ವಾಚಿಸಿದರು. ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಹಮ್ಮಿಕೊಂಡ ಕವಿಗೋಷ್ಠಿಯಲ್ಲಿ ಕವಿ ಪ್ರೇಮಾ ಮಾದಪ್ಪ ಅಪ್ಪುವನ್ನು ಕವಿತೆಯ ಮೂಲಕ ಸ್ಮರಿಸಿಕೊಡಿದ್ದು ಹೀಗೆ: ‘ಅನಾಥ ಮಕ್ಕಳ ಬದುಕಿಗೆ ಬೆಳಕು ನೀಡಿದ ದಿನಕರನೇ, ಅನ್ನ ಅಕ್ಷರ ಆಶ್ರಯ ಕೊಟ್ಟ ಕರ್ಮಯೋಗಿಯೇ, ಆಸರೆಯ ಆಕಾಶವೇ, ವಾತ್ಸಲ್ಯದ ಒಡೆಯನೇ, ಹುಟ್ಟಬೇಕು ಮನೆ ಮನೆಗೂ ನಿನ್ನಂಥ ಒಬ್ಬ ಮಗ, ಬೆಳಗಬೇಕು ಜಗವ ನಿಸ್ವಾರ್ಥ ನೇಸರನಂತೆಯೇ, ವಿಶ್ವ ಹೆತ್ತ ಮಕ್ಕಳು ಆಗಬೇಕು ನಿನ್ನಂತೆಯೇ, ಹೊಸ ಯುಗವೇ ಮರಳಿ ಬರಲಿ, ನಿನ್ನನ್ನು ನಮಗಾಗಿ ಮತ್ತೆ ಕರೆ ತರಲಿ…’ ಎಂದು ಕವಿತೆಯಲ್ಲಿ ಅಪ್ಪುವಿನ ಗುಣಗಾನ ಮಾಡಿದರು.

ಜಂಬೂಸವಾರಿಯಲ್ಲಿ ಅಪ್ಪು ಸ್ತಬ್ಧಚಿತ್ರ:
ಜಂಬೂಸವಾರಿ ಮೆರವಣಿಗೆಯಲ್ಲಿ ಅಪ್ಪು ಅವರ ಸ್ತಬ್ಧಚಿತ್ರ ಗಮನ ಸೆಳೆಯಿತು. ಅಪ್ಪು ಚಾಮರಾಜನಗರ ಜಿಲ್ಲೆಯ ರಾಯಭಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಚಾಮರಾಜನಗರ ಜಿಲ್ಲೆಯು ಅಪ್ಪುವಿನ ಸ್ತಬ್ಧಚಿತ್ರ ನಿರ್ಮಾಣ ಮಾಡುವ ಮೂಲಕ ಅಪ್ಪುವಿಗೆ ವಿಶೇಷ ಗೌರವ ಸಲ್ಲಿಸಿತು. ಇಷ್ಟು ಮಾತ್ರವಲ್ಲದೆ ದಸರೆಯ ಹಲವಾರು ಕಾರ್ಯಕ್ರಮಗಳಲ್ಲಿ, ಜಂಬೂಸವಾರಿಯ ಉದ್ದಕ್ಕೂ ಅಪ್ಪುವಿನ ಭಾವಚಿತ್ರಗಳು ರಾರಾಜಿಸಿದವು.

ಅಪ್ಪುಗೋಸ್ಕರ ಹಾಡಿದ ಸೋನು ನಿಗಮ್:
ಯುವ ದಸರಾದಲ್ಲಿ ಪಾಲ್ಗೊಂಡ ಖ್ಯಾತ ಗಾಯಕ ಸೋನು ನಿಗಮ್ ಅಪ್ಪುಗೋಸ್ಕರ ಅಪ್ಪು ಅಭಿನಯದ ಹಾಡುಗಳನ್ನು ಹಾಡಿ ರಂಜಿಸಿದರು. ‘ನಮ್ಮನ್ನು ಅಗಲಿರುವ ಹಾಗೂ ಅಪಾರ ಸಂಖ್ಯೆಯಲ್ಲಿ ಜನರು ಪ್ರೀತಿಸುವ ನಟ ಪುನೀತ್ ರಾಜ್ ಕುಮಾರ್‌ಗೋಸ್ಕರ ಹಾಡು ಹಾಡುತ್ತೇನೆ’ ಎಂದು ಹೇಳುವ ಮೂಲಕ ಸೋನು ನಿಗಮ್ ಅಪ್ಪು ನಟನೆಯ ‘ಪರಮಾತ್ಮ’ ಚಿತ್ರದ ಪರವಶನಾದೆನು ಅರಿಯುವ ಮುನ್ನವೇ ಪರಿಚಿತನಾಗಲಿ ಹೇಗೆ ಪ್ರಣಯುಕು ಮುನ್ನವೇ..,’ ‘ಮಿಲನ’ ಚಿತ್ರದ ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ.. ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿ ಅಪ್ಪುವಿಗೆ ಗೌರವ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net