

ಮೈಸೂರು: ನಗರದ ಹೊರವಲಯದ ಉತ್ತನಹಳ್ಳಿ ಮೈದಾನದಲ್ಲಿ ಅ.6 ರಿಂದ 10ರವರೆಗೆ ಹಮ್ಮಿಕೊಂಡಿರುವ ಯುವ ದಸರಾವನ್ನು 1 ಲಕ್ಷ ಜನರು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದರು.
ಈ ಬಾರಿ ನಗರದ ಹೊರ ವಲಯದಲ್ಲಿ ಯುವ ದಸರಾ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಭದ್ರತೆಯ ವಿಚಾರ ವಾಗಿ ಆತಂಕದ ಮಾತುಗಳು ಕೇಳಿ ಬಂದಿದೆ. ಆದರೆ, ಯಾರು ಸಹ ಆತಂಕ ಪಡುವ ಅವಶ್ಯಕತೆ ಇಲ್ಲ. ವಿಶೇಷವಾಗಿ ಮಹಿಳೆಯರ ಭದ್ರತೆಯ ವಿಚಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
95 ಸಾವಿರ ಜನರಿಗೆ ಉಚಿತ ಪ್ರವೇಶ: ಒಟ್ಟು 1 ಲಕ್ಷ ಜನರು ಯುವ ದಸರಾ ವೀಕ್ಷಿಸಬಹುದು. ಈ ಪೈಕಿ ಕೇವಲ 5 ಸಾವಿರ ಆಸನಗಳಿಗೆ ಮಾತ್ರ ಟಿಕೆಟ್ ನಿಗದಿ ಮಾಡಲಾ ಗಿದ್ದು, ಆ ಟಿಕೆಟ್‌ಗಳು ಸಹ ಸಂಪೂರ್ಣ ಮಾರಾಟವಾಗಿಲ್ಲ. ಒಟ್ಟು 95 ಸಾವಿರ ಜನರು ಉಚಿತವಾಗಿ ಯುವ ದಸರಾ ವೀಕ್ಷಿಸಲು ಅವಕಾಶವಿದ್ದು, ಜನರು ಈ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳದೆ ಯುವ ದಸರಾ ವೀಕ್ಷಿಸಲು ಆಗಮಿಸಬೇಕು. ಪ್ರತಿನಿತ್ಯ 50 ರಿಂದ 70 ಸಾವಿರ ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಿದ್ದೇವೆ. ಈ ಬಾರಿ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದರು.
ಬಿಗಿ ಬಂದೋಬಸ್ತ್: ಭದ್ರತೆಗೆ ಒಟ್ಟು 1239 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 4 ಎಸ್‌ಪಿ, 12 ಡಿಎಸ್‌ಪಿ, 37 ಸಿಪಿಐ, 76 ಪಿಎಸ್‌ಐ, 110 ಎಎಸ್‌ಐ, 600 ಎಚ್‌ಸಿ ಮತ್ತು ಪಿಸಿ, 100 ಡಬ್ಲುೃಎಚ್‌ಸಿ ಮತ್ತು ಡಬ್ಲುೃಪಿಸಿ, 300 ಎಚ್‌ಜಿಯನ್ನು ಭದ್ರತೆಗೆ ಬಳಕೆ ಮಾಡಿಕೊಳ್ಳಲಾಗಿದೆ. ಟ್ರಾಫಿಕ್ ನಿರ್ವಹಣೆಗೆ 2 ಪಿಐ, 6 ಪಿಎಸ್‌ಐ, 10 ಎಎಸ್‌ಐ, 50 ಎಚ್‌ಸಿ ಮತ್ತು ಪಿಸಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಹೆಚ್ಚುವರಿಯಾಗಿ 6 ಕೆಎಸ್‌ಆರ್‌ಪಿ, 10 ಡಿಎಎಆರ್, 10 ಎಎಸ್‌ಸಿ ತಂಡ, 4 ಕ್ಯೂಆರ್‌ಟಿ, 2 ಆಂಬುಲೆನ್ಸ್, 2 ಅಗ್ನಿ ಶಾಮಕ ವಾಹನ, 1 ಮೊಬೈಲ್ ಕಮಾಂಡೋ ವಾಹನ ನಿಯೋಜಿಸಲಾಗಿದೆ. ಬಂದೋಬಸ್ತ್‌ಗೆ ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗಳಿಂದ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ ಎಂದರು.
ಮಹಿಳೆಯರ ಭದ್ರತೆಗೆ ಒತ್ತು: ಮಹಿಳೆಯರ ಭದ್ರತೆ ವಿಚಾರವಾಗಿ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಯಾರೂ ಸಹ ಆತಂಕ ಪಡುವ ಅವಶ್ಯಕತೆ ಇಲ್ಲ. ಮಹಿಳೆಯರಿಗೆ ಭದ್ರತೆ ಒದಗಿಸಲು ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಹಿಳೆಯರಿಗೆ ಯುವ ದಸರಾ ವೀಕ್ಷಿಸಲು ಪ್ರತ್ಯೇಕವಾಗಿ 5 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಂದುವೇಳೆ ಹೆಚ್ಚುವರಿಯಾಗಿ ಮಹಿಳೆಯರು ಬಂದರೆ ಅವರಿಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಒಬ್ಬೊಂಟಿ ಮಹಿಳೆಯರು ಅಥವಾ ಮಹಿಳಾ ಸಂಘ ಸಂಸ್ಥೆಗಳಿಂದ ಗುಂಪಾಗಿ ಬರುವ ಮಹಿಳೆಯರು ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.
ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವವರ ಮೇಲೆ ನಿಗಾ ಇಡಲಾಗುವುದು. ಇದಕೋಸ್ಕರ 10 ವಾಚ್ ಟವರ್‌ಗಳನ್ನು ನಿರ್ಮಾಣ ಮಾಡಲಾಗಿದೆ. 5 ರಿಂದ 6 ಕಡೆಗೆ ಪೊಲೀಸ್ ಹೆಲ್ಪ್ ಡೆಸ್ಕ್ ತೆರೆಯಲಾಗಿದ್ದು,ಇಲ್ಲಿ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಹಾಯ ಪಡೆಯಬಹುದು ಅಥವಾ ಅಗತ್ಯ ಮಾಹಿತಿ ಪಡೆಯಬಹುದು. ಅಗತ್ಯ ಇರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳಡಿಸಲಾಗಿದೆ. ಸುತ್ತಮುತ್ತ ಕಾಡು ಪ್ರದೇಶ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೊ ಂದಿಗೆ ಸಮನ್ವಯ ಸಾಧಿಸಿಕೊಂಡು ಪ್ರಾಣಿಗಳ ಹಾವಳಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಿಂದ ಯುವ ದಸರಾ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಲು 200 ರಿಂದ 250 ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಪಾರ್ಕಿಂಗ್‌ಗೆ ಒಟ್ಟು ಮೂರು ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರತಿ ಸ್ಥಳದಲ್ಲೂ 800 ಕಾರುಗಳನ್ನು ನಿಲ್ಲಿಸಬಹುದು. ಪಾರ್ಕಿಂಗ್ ಜಾಗ ಹಾಗೂ ಯುವ ದಸರಾ ಕಡೆ ತೆರಳುವ ಮಾರ್ಗದಲ್ಲಿ ಸಾಕಷ್ಟು ಬೆಳಕು ಇರುವಂತೆ ವ್ಯವಸ್ಥೆ ಮಾಡಲಾಗಿದೆ. ನಗರದ ಹೊರ ವಲಯದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ಕಾರ್ಯಕ್ರಮ ಪ್ರಾರಂಭಿಸಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.