

ಬಾಳೆಹೊನ್ನೂರು: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಮಾರ್ಚ್ 10ರಿಂದ 14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.
ಮಾ.10ರಂದು ಧ್ವಜಾರೋಹಣ ಮತ್ತು ಹರಿದ್ರಾಲೇಪನದ ಮೂಲಕ ಯುಗಮಾನೋತ್ಸವ, ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಂದು ವೀರಗಾಸೆ-ಪುರವಂತರ ಸಮ್ಮೇಳನ ಆಯೋಜಿಸಲಾಗಿದೆ. ಮಾ.11ರಂದು ದೀಪೋತ್ಸವ-ಕುಂಕುಮೋತ್ಸವ, ಶ್ರೀವೀರಭದ್ರ ಸ್ವಾಮಿ ಚಿಕ್ಕ ರಥೋತ್ಸವ ಹಾಗೂ ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೃಹತ್ ಕೃಷಿ ಸಮ್ಮೇಳನ, ಕಾಫಿ-ಅಡಕೆ ಬೆಳೆಗಾರರ ಹಿತ ಚಿಂತನ-ಮಂಥನ ಸಮಾರಂಭ ನಡೆಯಲಿದೆ.
ಮಾ.12ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ, ಶಿವಾದ್ತೈತ ಸಮ್ಮೇಳನ ನಡೆಯಲಿದೆ.
ಪ್ರತಿ ವರ್ಷ ಶ್ರೀಪೀಠದಿಂದ ನೀಡುವ ಪ್ರತಿಷ್ಠಿತ ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ, ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳೆ ಡಾ.ಕವಿತಾ ಮಿಶ್ರಾ ಅವರಿಗೆ ಪ್ರದಾನ ಮಾಡಲಾಗುವುದು.
ಮಾ.13ರಂದು ಶಯನೋತ್ಸವ, ಶ್ರೀಜಗದ್ಗುರು ಶಿವಾನಂದ ಎಸ್ಟೇಟ್‌ನಲ್ಲಿ ಪೂಜಾ-ಪ್ರಸಾದ, ಕೆಂಡಾರ್ಚನೆ ಹಾಗೂ ಜಾನಪದ ಸಮ್ಮೇಳನ, ಮಾ.14ರಂದು ಪೌರ್ಣಿಮೆ ದಿನದಂದು ವಸಂತೋತ್ಸವ, ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆ ನಡೆಯಲಿದೆ ಎಂದು ಜಗದ್ಗುರುಗಳು ತಿಳಿಸಿದ್ದಾರೆ.