

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬಿರುಬಿಸಿಲಿನ ನಡುವೆ ಎದುರಾದ ಯುಗಾದಿಯನ್ನು ಗ್ರಾಮಾಂತರ ಜಿಲ್ಲೆಯ ಜನ ಸಂಭ್ರಮದಿಂದಲೇ ಸ್ವಾಗತಿಸಿದರು. ಮಂಗಳವಾರ ಸಿಹಿಹೋಳಿಗೆಯೊಂದಿಗೆ ಹಬ್ಬದೂಟ ಸವಿದ ಜನ, ಬುಧವಾರದ ಹೊಸತೊಡಕಿಗೆ ಖಾರದ ಭೋಜನ ಸವಿಯುವ ಮೂಲಕ ಎರಡೂ ದಿನದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮಳೆ ಕೊರತೆ, ಕುಡಿವ ನೀರಿಗೂ ಹಾಹಾಕಾರ, ಬರಗಾಲದ ಕರಿಛಾಯೆಯ ನಡುವೆಯೂ ಹಿಂದುಗಳ ಹೊಸವರ್ಷಾಚರಣೆಯ ಯುಗಾದಿ ಹಬ್ಬವನ್ನು ಜಿಲ್ಲೆಯ ಜನ ಸಂಭ್ರಮದಿಂದಲೇ ಸ್ವಾಗತಿಸಿದರು. ಸೋಮವಾರ ಸಂಜೆಯಿಂದಲೇ ಜಿಲ್ಲೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ ದೃಶ್ಯ ಕಂಡುಬಂತು. ಬರಗಾದ ಹಿನ್ನೆಲೆಯಲ್ಲಿ ಹೂ-ಹಣ್ಣು ತರಕಾರಿಯ ಬೆಲೆ ಗಗನಮುಖಿಯಾಗಿದ್ದರೂ ಹಬ್ಬದ ಸಾಮಗ್ರಿ ಖರೀದಿ ಭರ್ಜರಿಯಾಗಿಯೇ ನಡೆಯಿತು.
ಮಾವಿನ ಸೊಪ್ಪಿಗೆ ಡಿಮಾಂಡ್: ಕಳೆದ ನಾಲ್ಕೈದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಸೊಪ್ಪಿಗೆ ಡಿಮಾಂಡ್ ಸೃಷ್ಟಿಯಾಗಿತ್ತು. ಯುಗಾದಿ ಹಬ್ಬಕ್ಕೆ ಪ್ರಮುಖವಾಗಿ ಮಾವಿನ ತಳಿರು ತೋರಣ ಕಟ್ಟುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಮಾವಿನ ಸೊಪ್ಪು ಖರೀದಿಗೆ ಜನ ಮುಗಿಬಿದ್ದಿದ್ದರು. ಸಣ್ಣಸಣ್ಣಮಾವಿನ ಕಟ್ಟಿಗೆ 50 ರೂಪಾಯಿಯಿಂದ 70 ರೂಪಾಯಿವರೆಗೆ ದರ ನಿಗದಿಯಾಗಿತ್ತು. ಚೌಕಾಸಿ ಮಾಡಿ ಮಾವಿನ ಸೊಪ್ಪು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರೊಂದಿಗೆ ಪ್ರಮುಖವಾಗಿ ಬೇವಿನ ಸೊಪ್ಪಿಗೂ ಹೆಚ್ಚು ಬೇಡಿಕೆ ಇದ್ದಿದ್ದರಿಂದ ಮಾವು ಹಾಗೂ ಬೇವಿನ ಸೊಪ್ಪಿನ ಜೋಡಿ ಕಟ್ಟುಗಳನ್ನು ಮಾರಾಟ ಮಾಡಲಾಗುತ್ತಿತ್ತು.
ಹೂವು, ಹಣ್ಣು ಪೂಜಾ ಸಾಮಗ್ರಿ ಸೇರಿ ಇನ್ನಿತರ ವಸ್ತುಗಳ ಖರೀದಿಗೆ ತಾಲೂಕು ಕೇಂದ್ರಗಳ ಮಾರುಕಟ್ಟೆಗಳಲ್ಲಿ ಗ್ರಾಹಕರ ದಂಡು ಕಂಡುಬಂತು. ಮಾವಿನ ಸೊಪ್ಪು, ಬೇವಿನ ಸೊಪ್ಪು ದಂಡಿಯಾಗಿ ದಾಸ್ತಾನು ಮಾಡಲಾಗಿತ್ತು. ಅದರಲ್ಲೂ ಚಿಗುರು ಮಾವಿನ ಸೊಪ್ಪಿಗೆ ಬಹಳ ಬೇಡಿಕೆ ಕಂಡುಬಂತು. ತಮಿಳುನಾಡು, ಆಂಧ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಕನಕಾಂಬರ, ಗುಲಾಬಿ, ಮಲ್ಲಿಗೆ, ಸಂಪಿಗೆ, ತಾವರೆ, ಸೇವಂತಿ ಸೇರಿ ತರಹೇವಾರಿ ಬಗೆಯ ಹೂವುಗಳ ರಾಶಿ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಕೈಬೀಸಿ ಕರೆಯುತ್ತಿತ್ತು.
ಜಿಲ್ಲಾಡಳಿತ ಭವನದಲ್ಲಿ ಸಂಭ್ರಮ ಜಿಲ್ಲೆಯ ಶಕ್ತಿ ಕೇಂದ್ರ ದೇವನಹಳ್ಳಿಯಲ್ಲಿನ ಜಿಲ್ಲಾಡಳಿತ ಭವನದಲ್ಲಿ ಸೋಮವಾರವೇ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಂಗಳವಾರ ಹಬ್ಬದ ದಿನವಾಗಿದ್ದರಿಂದ ಹಿಂದಿನ ದಿನವೇ ಜಿಲ್ಲಾಡಳಿತಭವನದಲ್ಲಿನ 36ಕ್ಕೂ ಹೆಚ್ಚು ಇಲಾಖೆ ಕಚೇರಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳಾ ಸಿಬ್ಬಂದಿ ಹಬ್ಬದ ಮುನ್ನಾದಿನವೇ ಹೊಸ ಬಟ್ಟೆ ತೊಟ್ಟು ರಂಗೋಲಿ ಬಿಡಿಸಿ ಹಬ್ಬವನ್ನು ಬರಮಾಡಿಕೊಂಡಿದ್ದರು.
ಗಗನಕ್ಕೇರಿದ ವಸ್ತುಗಳ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಯುಗಾದಿ ಹಬ್ಬದ ಪ್ರಯುಕ್ತ ಹೂ-ಹಣ್ಣು ತರಕಾರಿಗಳ ಬೆಲೆ ಗಗನಕ್ಕೇರಿವೆ. ಆದರೂ ಗ್ರಾಹಕರ ಉತ್ಸಾಹ ಕುಗ್ಗಿದಂತೆ ಕಂಡುಬರಲಿಲ್ಲ.ಯುಗಾದಿ ಹಬ್ಬವನ್ನು ಪ್ರತಿಯೊಬ್ಬರು ಸಂಭ್ರಮ ಸಡಗರದಿಂದ ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರ ನಡೆಯಿತು. ಗಗನಕ್ಕೇರಿರುವ ಬೆಲೆ ಯನ್ನೂ ಲೆಕ್ಕಿಸದೆ ಮಾರುಕಟ್ಟೆಗಳಲ್ಲಿ ಗ್ರಾಹಕರು ಹಬ್ಬದ ಸಾಮಾಗ್ರಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ಗುಡ್ಡೆಮಾಂಸಕ್ಕೆ ಚೀಟಿ ಯುಗಾದಿ ಹಬ್ಬಕ್ಕೂ ಮೊದಲೇ ಇಂತಿಷ್ಟು ಹಣ ನಿಗದಿ ಮಾಡಿಕೊಂಡು ಹಲವರು ಚೀಟಿಗಳನ್ನು ಹಾಕಿಕೊಂಡು ಹೊಸತೊಡಕು ದಿನದಂದು ಗುಡ್ಡೆಮಾಂಸ ಪಡೆಯುವ ಪರಿಪಾಠ ಗ್ರಾಮೀಣಭಾಗದಲ್ಲಿ ಈ ಹಿಂದೆಯಿಂದಲೂ ರೂಢಿಯಲ್ಲಿದೆ. ಕೆಲ ಗ್ರಾಮಗಳಲ್ಲಿ ಗುಡ್ಡೆಮಾಂಸ ನೀಡುವ ಸಲುವಾಗಿ ನಾಲ್ಕೈದು ದಿನ ಮುಂಚಿತವಾಗಿ ಕುರಿ,ಮೇಕೆ ಖರೀದಿಸಿ ತಂದಿಟ್ಟುಕೊಂಡಿದ್ದರು. ಯುಗಾದಿ ಹಬ್ಬದ ಮಾರನೇ ದಿನ ಗ್ರಾಮೀಣ ಭಾಗಗಳಲ್ಲಿ ಹೊಸತೊಡಕು ಹಬ್ಬವನ್ನು ಭರ್ಜರಿಯಾಗಿ ಆಚರಿಸುವುದರಿಂದ ಗುಡ್ಡೆ ಮಾಂಸ ಖರೀದಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕುರಿ ಮೇಕೆಗಳನ್ನು ಕಡಿದು ಗುಡ್ಡೆ ಮಾಂಸ ವಿತರಿಸುವ ಕಾರ್ಯ ಕಂಡುಬಂತು. ಮುಂಜಾನೆಯಿಂದಲೇ ಮಾಂಸದ ಅಂಗಡಿಗಳ ಮುಂದೆ ಗ್ರಾಹಕರ ಸಾಲು ಕಂಡುಬಂತು.