

| ಕೆ.ಎನ್.ರಾಘವೇಂದ್ರ ಮಂಡ್ಯ
ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಅನುಕೂಲವಾಗಿದ್ದ ‘ವಿದ್ಯಾಗಮ’ ಯೋಜನೆ ಸ್ಥಗಿತಗೊಂಡಿದೆ. ಆದರೆ ಮಂಡ್ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಿಂದ ಯೂಟ್ಯೂಬ್ನಲ್ಲಿಯೇ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಇದು ರಾಜ್ಯದಲ್ಲಿಯೇ ಮಾದರಿ ಪ್ರಯತ್ನವಾಗಿದೆ.
23 ಶಿಕ್ಷಕರಿಂದ ಬೋಧನೆ: 2 ತಿಂಗಳ ಹಿಂದೆ ಈ ಪ್ರಯೋಗಕ್ಕೆ ಕೈ ಹಾಕಲಾಯಿತು. ಈ ಸಂಬಂಧ ಡಯಟ್ನಿಂದ ಶಿಕ್ಷಕರಿಗೆ ಮಾಹಿತಿ ನೀಡಿ, ಸ್ವಯಂ ಪ್ರೇರಿತರಾಗಿ ಬೋಧಿಸಲು ಅವಕಾಶ ನೀಡಲಾಯಿತು. ಅದರಂತೆ 23 ಶಿಕ್ಷಕರು ಬೋಧನೆಗೆ ಸಿದ್ಧರಾದರು. ಮೊದಲು ಇವರಿಗೆಲ್ಲ ತರಬೇತಿ ನೀಡಲಾಯಿತು. ನಂತರ ಡಯಟ್ನಿಂದಲೇ ಕ್ಯಾಮರಾ ಮತ್ತು ಲೈಟ್ ವ್ಯವಸ್ಥೆ ಮಾಡಿಕೊಂಡು, ಒಂದು ಕೊಠಡಿ ಮೀಸಲಿಡಲಾಯಿತು. ‘ಸವಿ ಮಂಡ್ಯ’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ, ಮೊದಲ ಹಂತದಲ್ಲಿ ಪ್ರೋಮೋ ಸಿದ್ಧಪಡಿಸಿ ಎಲ್ಲರಿಗೂ ಪರಿಚಯಿಸಲಾಯಿತು. ಬಳಿಕ ಶಿಕ್ಷಕರು ಪಾಠ ಶುರು ಮಾಡಿದರು. 6 ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳನ್ನು ಬೋಧಿಸಿ, ಯೂಟ್ಯೂಬ್ಗೆ ಅಪ್ಲೋಡ್ ಮಾಡಲಾಗುತ್ತಿದೆ.
ಪ್ರಸಾರಕ್ಕೂ ಮುನ್ನ ಪರಿಶೀಲನೆ: ಶಿಕ್ಷಕರು ಬೋಧಿಸುವ ಪಾಠವನ್ನು ಮೊದಲು ಡಯಟ್ನಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ಪಾಠದಲ್ಲಿರುವ ವಿಷಯಗಳು ಸರಿಯಾಗಿರುವುದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಅಪ್ಲೋಡ್ ಮಾಡಲಾಗುತ್ತಿದೆ. ಅಪ್ಲೋಡ್ ಬಳಿಕ ಅದರ ಲಿಂಕ್ ಅನ್ನು ಬಿಇಒ, ಬಿಆರ್ಸಿ, ಬಿಆರ್ಪಿ, ಮುಖ್ಯಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತಿದೆ. ಚಾನಲ್ಗೆ 959 ಜನ ನೋಂದಣಿಯಾಗಿದ್ದಾರೆ. ಜತೆಗೆ, ವಿಡಿಯೋ ಗಳನ್ನು ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಕರೊನಾದಿಂದಾಗಿ ಶಿಕ್ಷಣಕ್ಕೆ ಹಿನ್ನಡೆ ಯುಂಟಾಗಿರುವ ಇಂಥ ಸಂದರ್ಭದಲ್ಲಿ ಡಯಟ್ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸರ್ಕಾರ ದಿಂದ ಅನುದಾನವಿಲ್ಲದಿದ್ದರೂ ಇರುವ ಹಣದಲ್ಲಿಯೇ ಕಾರ್ಯಕ್ರಮ ಆರಂಭಿಸ ಲಾಗಿದೆ. ವಿಡಿಯೋಗಳನ್ನು ಯೂಟ್ಯೂಬ್ಗೆ ಹಾಕುವ ಮುನ್ನ ಮಾಡುವ ಮಿಕ್ಸಿಂಗ್ ಕೂಡ ಶಿಕ್ಷಕರೇ ಮಾಡುತ್ತಿದ್ದಾರೆ.
ಪಠ್ಯೇತರ ಚಟುವಟಿಕೆ ಶುರು
ಏಳನೇ ತರಗತಿ ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಯ ವಿಡಿಯೋಗಳನ್ನು ಮಾಡಿಸಿ ಅಪ್ಲೋಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತ್ರಕಲೆ ಹಾಗೂ ಯೋಗ ತರಗತಿಯ ವಿಡಿಯೋ ಮಾಡಿಸಿ ಯೂಟ್ಯೂಬ್ಗೆ ಹಾಕಲಾಗುತ್ತಿದೆ. ಈ ಸಂಬಂಧ ಸಂಬಂಧಪಟ್ಟ ಶಿಕ್ಷಕರು ವಿಡಿಯೋ ಮಾಡಬೇಕಿದೆ.
‘ಸವಿ ಮಂಡ್ಯ’ ಯೂಟ್ಯೂಬ್ ಚಾನಲ್ ಮೂಲಕ ಏಳನೇ ತರಗತಿ ಮಕ್ಕಳಿಗೆ ಪಾಠ ಕಲಿಸಲಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ಉತ್ತಮ ಸ್ಪಂದನೆಯೂ ಸಿಗುತ್ತಿದೆ. | ಶಿವಮಾದಪ್ಪ ಪ್ರಾಂಶುಪಾಲ, ಡಯಟ್, ಮಂಡ್ಯ