ತಂಬಾಕು ಸೇವನೆಗೆ ದಾಸರಾಗುತ್ತಿರುವ ಯುವಕರು

mysore
Published on

ಮೈಸೂರು: ಮಾನವಾಭಿವೃದ್ಧಿಗೆ ದೊಡ್ಡ ಕಂಟಕವಾಗಿರುವ ತಂಬಾಕು ಸೇವನೆ ವಿರುದ್ಧ ದೊಡ್ಡಮಟ್ಟದ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ಹಿರಿಯ ವ್ಯವಸ್ಥಾಪಕಿ, ವೈದ್ಯೆ ಡಾ.ಎಸ್.ಪಿ.ವಿಭಾ ಹೇಳಿದರು.

ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೀಡಿ, ಸಿಗರೇಟ್ ಸೇರಿದಂತೆ ತಂಬಾಕನ್ನು ಬೇರೆ ಬೇರೆ ರೂಪಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಇದು ಕೇವಲ ಜೀವನ ನಷ್ಟವಷ್ಟೇ ಅಲ್ಲ, ಆರ್ಥಿಕ ನಷ್ಟವನ್ನೂ ತರುತ್ತದೆ.

ತಂಬಾಕು ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 70 ಲಕ್ಷಕ್ಕಿಂತ ಅಧಿಕ ಜನರು ಮೃತಪಡುತ್ತಿದ್ದಾರೆ. ಭಾರತದಲ್ಲಿ 10 ಲಕ್ಷ ಜನರು ಬೀಡಿ, ಸಿಗರೇಟ್, ತಂಬಾಕಿನ ನೇರ ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಹಾಗೂ ಇತರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ತಂಬಾಕು ಸೇವನೆಯಿಂದ ಗಂಟಲು, ಶ್ವಾಸಕೋಶ ಮಾತ್ರವಲ್ಲದೆ ದೇಹದ ಪ್ರತಿಯೊಂದು ಜೀವ ಕೋಶದ ಮೇಲೆ ಅದು ಮಾರಕ ಪರಿಣಾಮವನ್ನುಂಟು ಮಾಡುತ್ತದೆ. ಯುವಕರು ಸಿಗರೇಟ್ ಸೇದುವುದು ಸ್ಟೈಲ್ ಎಂದು ಭಾವಿಸಿ ಅವುಗಳಿಗೆ ದಾಸರಾಗುತ್ತಿದ್ದಾರೆ. ತಮ್ಮ ಆರೋಗ್ಯದ ಜತೆಗೆ, ಇನ್ನಿತರರ ಆರೋಗ್ಯವನ್ನೂ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.


ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಟ್ಟು ನಿಟ್ಟಾಗಿ ಜಾರಿಯಾಗಬೇಕು. ದಂಡದ ಮೊತ್ತ ಹೆಚ್ಚಿದರೆ ಧೂಮಪಾನಿಗಳು ಸಾರ್ವಜನಿಕವಾಗಿ ಧೂಮಪಾನ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ. ಜತೆಗೆ, ಯುವಜನರು ಈ ಕುರಿತು ಜಾಗೃತವಾಗಿ ತಂಬಾಕು ಸೇವನೆಯಿಂದ ದೂರವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಟಿ.ರಮೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net