

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚು ಕಾಡುತ್ತಿದ್ದು, ಯುವಕರು ಹಾಗೂ ಮಕ್ಕಳು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಅಂಜನಾದ್ರಿ ಬೆಟ್ಟ ಹತ್ತುವಾಗ 17 ವರ್ಷದ ಹುಡುಗನೋರ್ವ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೃತ ಹುಡುಗನನ್ನು ಜಯೇಶ್ ಯಾದವ್ (17) ಎಂದು ಗುರುತಿಸಲಾಗಿದೆ. ಈತ ಕೊಪ್ಪಳ ತಾಲ್ಲೂಕಿನ ಹುಲಗಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಕೊಪ್ಪಳ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದರು ಎಂದು ವರದಿಯಾಗಿದೆ.
ಸ್ನೇಹಿತರ ಜೊತೆಗೆ ಜಯೇಶ್ ಇಂದು (ಜನವರಿ 29) ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ 575 ಮೆಟ್ಟಿಲುಗಳನ್ನು ಹತ್ತಿದ್ದಾಗ ಜಯೇಶ್ ಕುಸಿದು ಬಿದ್ದಿದ್ದು, ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಜಯೇಶ್ನನ್ನು ಪರಿಶೀಲಿಸಿದ ವೈದ್ಯರು ಹೃದಯಾಘಾತವಾಗಿ (Heart Attack) ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆ ಕುರಿತಾಗಿ ಮಾತನಾಡಿರುವ ದೇವಸ್ಥಾನದ ಸಿಬ್ಬಂದಿಯೊಬ್ಬರು, ಅಮವಾಸ್ಯೆ ಅಂಗವಾಗಿ ದೇವರ ದರ್ಶನ ಪಡೆಯಲು ಸ್ನೇಹಿತರೊಂದಿಗೆ ಬೆಟ್ಟ ಏರುವಾಗ ಮಧ್ಯಾಹ್ನ 3.15 ಗಂಟೆ ವೇಳೆಗೆ ಬೆಟ್ಟದ ತುದಿ ಬಳಿ ಏಕಾಏಕಿ ಸುಸ್ತು ಕಾಣಿಸಿಕೊಂಡು ಜಯೇಶ್ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆನೆಗೊಂದಿ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಬರಲಾಯಿತು. ಅಲ್ಲಿನ ವೈದ್ಯರು ಗಂಗಾವತಿಗೆ ಕರೆದೊಯ್ಯುವಂತೆ ಸೂಚಿಸಿದರು.
ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು, ಆತ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಘೋಷಿಸಿದರು. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದೇವಸ್ಥಾನದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.