

ನರಗುಂದ: ಊಟಕ್ಕೆಂದು ಹೋಟೆಲ್‌ಗೆ ತೆರಳಿದ್ದ ಯುವಕನನ್ನು ಮೂವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಪಟ್ಟಣದ ಕಸಬಾ ಬಡಾವಣೆಯ ಬಸವರಾಜ ಮಮ್ಮಟಗೇರಿ (22) ಕೊಲೆಯಾದ ಯುವಕ. ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ತಾಜ್ ಬಿರಿಯಾನಿ ಹೋಟೆಲ್‌ಗೆ ಮಧ್ಯಾಹ್ನ ಊಟಕ್ಕೆ ಆಗಮಿಸಿದ್ದ. ಯುವಕನೊಂದಿಗೆ ಹಳೆಯ ದ್ವೇಷ ಹೊಂದಿದ್ದ ಮೂವರು ದುಷ್ಕರ್ಮಿಗಳೂ ಇದೇ ಹೋಟೆಲ್‌ಗೆ ಆಗಮಿಸಿದ್ದರು. ಊಟ ಮಾಡುವ ನೆಪದಲ್ಲಿ ಒಳಗಡೆ ಪ್ರವೇಶಿಸಿ ಏಕಾಏಕಿ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ದಿಢೀರ್ ಘಟನೆಯಿಂದ ಗ್ರಾಹಕರು, ಸಾರ್ವಜನಿಕರು ಹೌಹಾರಿದ್ದರು. ಹೊಟೇಲ್ ಬಳಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಟ್ಟಣದ ಸರ್ಕಾರಿ ತಾಲೂಕಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹವನ್ನು ಮಳೆಯಲ್ಲಿಯೇ ಸಾಗಿಸಲಾಯಿತು. ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಎಫ್.ಎಸ್. ಮಣ್ಣೂರ, ಎಎಸ್‌ಐ ಡಿ.ಕೆ. ಹಾಲವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, ಕೊಲೆ ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೂವರು ಆರೋಪಿತರು ಬೈಕ್‌ನಲ್ಲಿ ಆಗಮಿಸಿ ಹತ್ಯೆಗೈದಿರುವುದು ತಿಳಿದು ಬಂದಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.