ಮೈಸೂರು: ದೇಶದ ಇತ್ತೀಚಿಗೆ ನಡೆಯುತ್ತಿರುವ ಬೆಳವಣಿಗೆಗಳು ಆತಂಕವುಂಟು ಮಾಡುವಂತಿರುವುದರಿಂದ ಬದಲಾವಣೆ ತರುವ ನಿಟ್ಟಿನಲ್ಲಿ ಯುವಜನತೆ ಚಿಂತಿಸಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಸಲಹೆ ನೀಡಿದರು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ಸಂಘಟನೆಯಿಂದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆ ಹೊರ ತಂದಿರುವ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಸತ್‌ನಲ್ಲಿ ಸುಮರು 149 ಮಂದಿ ಸಂಸದರನ್ನು ಹೊರಗಿಟ್ಟು, ಮೂರ್ನಾಲ್ಕು ಮಸೂದೆ ಅಂಗೀಕರಿಸಿರುವುದು ಸರಿಯಲ್ಲ. ಇದೇ ರೀತಿ ಗುಜರಾತ್‌ನಲ್ಲಿ ಈ ಹಿಂದೆಯೂ ಪ್ರಮುಖ ಮಸೂದೆ ಅಂಗೀಕಾರದ ವೇಳೆ ವಿರೋಧ ಪಕ್ಷದವರನ್ನು ಯಾವುದಾದರೂ ಒಂದು ಕಾರಣದಿಂದ ಹೊರಗಿಟ್ಟು ಅಂಗೀಕಾರ ಪಡೆದ ಉದಾಹರಣೆ ಇದೆ. ಈ ರೀತಿಯ ಬೆಳವಣಿಗೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಜಾತಿ ಗಣತಿ ಆಧರಿಸಿ ಸಂಸತ್‌ಗೆ ಸೀಟುಗಳನ್ನು ನಿರ್ಧರಿಸುವುದು ಸಹಾ ಸರಿಯಲ್ಲ. ಉತ್ತರ ಭಾರತದಲ್ಲಿ ಜನಸಂಖ್ಯೆ ಬೆಳೆಯುತ್ತಿದ್ದರೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಕುಟುಂಬ ಯೋಜನೆ ಕಾರಣದಿಂದಾಗಿ ಜನಸಂಖ್ಯೆ ಹೆಚ್ಚುತ್ತಿಲ್ಲ. ಹೀಗಿರುವಾಗ ಉತ್ತರ ಭಾರತದ ಸಂಸದರ ಸಂಖ್ಯೆ ಹೆಚ್ಚಾಗಿ, ದಕ್ಷಿಣ ಭಾರತದ್ದು ಅದೇ ರೀತಿ ಇರುತ್ತದೆ. ಈ ಕಾರಣದಿಂದಾಗಿ ದಕ್ಷಿಣ ಭಾರತದವರು ಸಂಸತ್‌ನಲ್ಲಿ ಧ್ವನಿಯೆತ್ತದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ .ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಸಂಘಟನೆ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಾಧ್ಯಮ ವಕ್ತಾರ ಕೆ.ಮಹೇಶ್ ಇದ್ದರು.